ಕರ್ನಾಟಕದಲ್ಲಿ ಮತ್ತೆ ಲಾಕ್‌ಡೌನ್ ಇಲ್ಲವೇ ಇಲ್ಲ: ಸಚಿವ ಡಾ.ಸುಧಾಕರ್ ಸ್ಪಷ್ಟನೆ
ಕಲಬುರಗಿ: ಕರ್ನಾಟಕ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ವಿಧಿಸುವ ಪ್ರಶ್ನೆಯೇ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.
ಜೂನ್ 14 ರ ಭಾನುವಾರ ಬೆಳಿಗ್ಗೆ ಕಲಬುರಗಿ ನಗರದ ದ ಜಿಮ್ಸ್ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಡಾ.ಸುಧಾಕರ್, “ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಮುಖ್ಯಮಂತ್ರಿ ಬಿ ಎಸ್ ಯಡಿಯುರಪ್ಪ ಅವರೊಂದಿಗೆ ಮಾತನಾಡಲಿದ್ದಾರೆ” ಎಂದು ಹೇಳಿದರು.
“ಕ್ವಾರಂಟೈನ್ ಕೇಂದ್ರಗಳಲ್ಲಿ ಮೂಲಸೌಕರ್ಯಗಳ ಕೊರತೆಯಿಲ್ಲ. ಎಲ್ಲಾ ವ್ಯವಸ್ಥೆಗಳನ್ನು ಮಾರ್ಗಸೂಚಿಗಳ ಪ್ರಕಾರ ಮಾಡಲಾಗುತ್ತದೆ” ಎಂದು ಅವರು ಹೇಳಿದರು. ಶಂಕಿತ ಜನರ ಗಂಟಲು ದ್ರವದ ಮಾದರಿಯ ವರದಿ ಬರುವ ಮುನ್ನವೇ ಜನರನ್ನು ತಮ್ಮ ಮನೆಗಳಿಗೆ ಕಳುಹಿಸುವ ವ್ಯವಸ್ಥೆಯನ್ನು ಅವರು ಸಮರ್ಥಿಸಿಕೊಂಡರು.
ವ್ಯಕ್ತಿಯು ಯಾವುದೇ ರೋಗಲಕ್ಷಣಗಳನ್ನು ಹೊಂದುವುದಿಲ್ಲದಿದ್ದರೆ ಸಾಂಕ್ರಾಮಿಕ ರೋಗ ಕೊರೋನಾ ಹರಡುವ ಸಾಧ್ಯತೆಗಳು ಕಡಿಮೆ ಎಂದು ಡಬ್ಲ್ಯುಎಚ್‌ಒ ಸ್ಪಷ್ಟಪಡಿಸಿದೆ ಎಂದು ಸಚಿವರು ಹೇಳಿದರು.
ಈಗ, ಮಹಾರಾಷ್ಟ್ರ ಮತ್ತು ವಿದೇಶಗಳಿಂದ ಆಗಮಿಸುವವರನ್ನು ಮಾತ್ರ ಕ್ವಾರಂಟೈನ್ ಗೆ ಒಳಪಡಿಸಲಾಗುತ್ತಿದೆ ಎಂದು ಡಾ.ಸುಧಾಕರ್ ಮಾಹಿತಿ ನೀಡಿದರು.
ಇದೇ ವೇಳೆ ಗುಲ್ಬರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಟ್ರಾಮಾ ಸೆಂಟರ್‌ನ್ನು ಅಕ್ಟೋಬರ್ 2ರಂದು ಉದ್ಘಾಟಿಸಲಾಗುವುದು ಎಂದು ಸಚಿವರು ಹೇಳಿದ್ದು “ಸಣ್ಣ ಪುಟ್ಟ ಕಾಮಗಾರಿಗಳನ್ನು ಪೂರ್ಣಗೊಳಿಸಿದ ಬಳಿಕ ಉಪಕರಣಗಳನ್ನು ತರಿಸುವ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಅಗತ್ಯವಿರುವ ಸಿಬ್ಬಂದಿ ವಿವರಗಳನ್ನು ನಿರ್ದೇಶಕರಿಗೆ ಕಳುಹಿಸಿ ಒಪ್ಪಿಗೆ ಪಡೆದು ತ್ವರಿತವಾಗಿ ಟ್ರಾಮಾ ಸೆಂಟರ್ ಕಾರ್ಯಾರಂಭ ಮಾಡುವಂತೆ ನೋಡಿಕೊಳ್ಳಬೇಕು” ಎಂದಿದ್ದಾರೆ.
ಇದರೊಡನೆ ಇದೀಗ ಖಾಲಿ ಇರುವ 16 ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಬೇಕೆಂದು ಅಧಿಕಾರಿಗಳಿಗೆ ಸಚಿವರು ಸೂಚನೆ ಕೊಟ್ಟಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಬದಲು ಪ್ರತ್ಯೇಕ ನೇಮಕ ನಿಯಮ ಮೂಲಕ ನೇಮಕಾತಿ ಕೈಗೊಳ್ಳಿ ಎಂದೂ ಸಚಿವರು ನಿರ್ದೇಶನ ನೀಡಿದ್ದಾರೆ.