ಉಡುಪಿ: 7ತಿಂಗಳ ಗರ್ಭಿಣಿ, ದ.ಕ. 30 ವರ್ಷದ ಯುವಕ, 55 ವರ್ಷದ ಮಹಿಳೆಗೆ ಪಾಸಿಟಿವ್ ಪತ್ತೆ
ಉಡುಪಿ: ಮುಂಬೈಯಿಂದ ಆಗಮಿಸಿ ಕ್ವಾರಂಟೈನ್‌ನಲ್ಲಿದ್ದ ಕೊಲ್ಲೂರಿನ 27 ವರ್ಷದ, ಏಳು ತಿಂಗಳ ಗರ್ಭಿಣಿಗೆ ಕೊರೊನಾ ಸೋಂಕು ದೃಢವಾಗಿದೆ. ಗರ್ಭಿಣಿಯೊಂದಿಗೆ ಆಕೆಯ ಪತಿಯನ್ನು ಕೂಡ ಐಷೋಲೇಷನ್‌ಗೆ ಒಳಪಡಿಸಲಾಗಿದೆ. ಇವರು ಮುಂಬೈನಿಂದ ಪ್ರಯಾಣಿಸಿದ್ದ ಬಸ್ಸಿನಲ್ಲಿ 28 ಮಂದಿ ಇದ್ದಿದ್ದು, ಇವರು ಈಗಾಗಲೇ ಕ್ವಾರಂಟೈನ್‌ನಲ್ಲಿದ್ದು ಅವರ ಬಗ್ಗೆಯೂ ನಿಗಾವಹಿಸಲಾಗಿದೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮಹಾರಾಷ್ಟ್ರದ ರಾಯಗಡದಿಂದ ಮಂಗಳೂರಿಗೆ ಆಗಮಿಸಿ ಕ್ವಾರೆಂಟೈನ್ ನಲ್ಲಿದ್ದ 30 ವರ್ಷದ ವ್ಯಕ್ತಿ ಹಾಗೂ ಮಂಗಳೂರಿನ ಯಯ್ಯಾಡಿಯ 55 ವರ್ಷದ ಮಹಿಳೆಯೂ ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರದಿಂದ ಬಳಲುತ್ತಿದ್ದು, ತಪಾಸಣೆಗೆಂದು ಕೋವಿಡ್ ಆಸ್ಪತ್ರೆಗೆ ಬಂದಾಗ ಆಕೆಯಲ್ಲೂ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.
ದ.ಕ. ದಲ್ಲಿ ಈವರೆಗೆ 47 ಕೊರೊನಾ ಪ್ರಕರಣ ದೃಢಪಟ್ಟಿದ್ದು, ಈ ಪೈಕಿ 10 ಮಂದಿ ಗುಣಮುಖರಾಗಿದ್ದಾರೆ. 32 ಸಕ್ರಿಯ ಪ್ರಕರಣಗಳಿದ್ದು, ಐವರು ಮೃತಪಟ್ಟಿದ್ದಾರೆ. ಉಡುಪಿಯಲ್ಲಿ 11 ಕೊರೊನಾ ಪ್ರಕರಣ ದೃಢಪಟ್ಟಿದ್ದು ಈ ಪೈಕಿ 3 ಮಂದಿ ಗುಣಮುಖರಾಗಿದ್ದಾರೆ. 7 ಸಕ್ರಿಯ ಪ್ರಕರಣಗಳಿದ್ದು , ಓರ್ವ ಕುಂದಾಪುರದ 54 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.