ಕರೆಂಟ್ ಕೊಡಲು ಹೋಗಿ ತಗ್ಲಾಹಾಕೊಂಡ್ರಾ ಸಾಹುಕಾರ್!

ಬೆಂಗಳೂರು: ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ಸಿಡಿ ರಿಲೀಸ್ ಆಗಿದ್ದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. 

ದೆಹಲಿಯ ಕರ್ನಾಟಕ ಭವನದಲ್ಲಿ ರಮೇಶ್ ಜಾರಕಿಹೊಳಿ ರಾಸಲೀಲೆ ನಡೆಸಿದ್ದು ಸರ್ಕಾರಿ ಐಬಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಬೆಂಗಳೂರಿನ ಆರ್.ಟಿ. ನಗರದ ಪಿಜಿಯಲ್ಲಿ ಯುವತಿ ವಾಸವಾಗಿದ್ದು, ಆಕೆಗೆ ಕೆಪಿಟಿಸಿಎಲ್‍ನಲ್ಲಿ ಉದ್ಯೋಗ ನೀಡುವ ಆಮಿಷವೊಡ್ಡಿ ಜಾರಕಿಹೊಳಿ ರಾಸಲೀಲೆ ನಡೆಸಿದ್ದಾರೆ ಎನ್ನುವ ಮಾಹಿತಿ ಕೇಳಿ ಬಂದಿದೆ.

ಎಫ್‌ಐಆರ್‌ ದಾಖಲಾಗಿಲ್ಲ: ಪ್ರಕರಣ ಸಂಬಂಧ ಸಂತ್ರಸ್ತೆ ಪರವಾಗಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಮೊದಲು ಪೊಲೀಸ್ ಆಯುಕ್ತ ಕಮಲ್ ಪಂತ್‍ರನ್ನು ಭೇಟಿಯಾಗಿ ದೂರು ನೀಡಲು ಮುಂದಾದರು. ಕೊನೆಗೆ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ದಿನೇಶ್ ಕಲ್ಲಹಳ್ಳಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ದಿನೇಶ್ ಕಲ್ಲಹಳ್ಳು ಮನವಿ ಮಾಡಿದ್ದಾರೆ.

ಪೊಲೀಸರು ಇನ್ನೂ ಎಫ್‍ಐಆರ್ ದಾಖಲಿಸಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಪಿ ಅನುಚೇತ್, ಸಂತ್ರಸ್ತೆಯ ಹೇಳಿಕೆ ಪಡೆದ ಮೇಲಷ್ಟೇ ಎಫ್‍ಐಆರ್ ದಾಖಲಿಸುವುದಾಗಿ ತಿಳಿಸಿದ್ದಾರೆ. ಈ ಮಧ್ಯೆ, ಸಂತ್ರಸ್ತೆ ಸಂಬಂಧಿಕರ ಜೊತೆ ಪೊಲೀಸರು ದೂರವಾಣಿ ಮೂಲಕ ಮಾತನಾಡಿದ್ದು, ಇದೆಲ್ಲಾ ಸತ್ಯ. ತನಿಖೆಗೆ ಸಹಕರಿಸ್ತೀವಿ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಸಂತ್ರಸ್ತೆ ಜೊತೆ ಸರಸದ ವೇಳೆ ರಮೇಶ್ ಜಾರಕಿಹೊಳಿ ಆಡಿರುವ ಮಾತುಗಳು ರಾಜ್ಯದಲ್ಲಿ ರಾಜಕೀಯದಲ್ಲಿ ಇನ್ನೊಂದು ಮಟ್ಟದ ಸಂಚಲನಕ್ಕೆ ಕಾರಣವಾಗಿವೆ. ಯಡಿಯೂರಪ್ಪ ಸರ್ಕಾರ ರಚನೆಗೆ ಕಾರಣರಾದ ರಮೇಶ್ ಜಾರಕಿಹೊಳಿ ಖುದ್ದು ಯಡಿಯೂರಪ್ಪ ವಿರುದ್ಧವೇ ಮಾತನಾಡಿದ್ದಾರೆ. ಸಿದ್ದರಾಮಯ್ಯ ಒಳ್ಳೆಯವರು, ಯಡಿಯೂರಪ್ಪ ಬಹಳ ಭ್ರಷ್ಟ ಎಂದು ರಮೇಶ್ ಜಾರಕಿಹೊಳಿ ಟೀಕಿಸಿದ್ದಾರೆ.

ಮುಖ್ಯಮಂತ್ರಿ ಆಗೋವರೆಗೂ ನಂಗೆ ನಿದ್ದೆ ಬರಲ್ಲ ಎಂದು ಕೂಡ ರಮೇಶ್ ಜಾರಕಿಹೊಳಿ ಹೇಳಿಕೊಂಡಿದ್ದಾರೆ. ಆ ವಿಡಿಯೋ ಕೂಡ ಈಗ ವೈರಲ್ ಆಗಿದೆ.

Leave a Reply

Your email address will not be published. Required fields are marked *

error: Content is protected !!