ಮಂಗಳೂರು: ನೂತನ ಮೇಯರ್ ಪ್ರೇಮಾನಂದ ಶೆಟ್ಟಿ, ಉಪಮೇಯರ್ ಸುಮಂಗಲಾ ಆಯ್ಕೆ
ಮಂಗಳೂರು ಮೇಯರ್ ಆಗಿ ಬಿಜೆಪಿಯ ಪ್ರೇಮಾನಂದ ಶೆಟ್ಟಿ ಹಾಗೂ ಉಪ ಮೇಯರ್ ಆಗಿ ಅದೇ ಪಕ್ಷದ ಸುಮಂಗಲಾ ರಾವ್ ಅವರು ಮಂಗಳವಾರ ಆಯ್ಕೆಗೊಂಡಿದ್ದಾರೆ.
ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಕೈ ಎತ್ತುವ ಮೂಲಕ ಅಭ್ಯರ್ಥಿಗಳ ಪರ ಮತ ಚಲಾವಣೆ ಪ್ರಕ್ರಿಯೆ ನಡೆಯಿತು. ಈ ಚುನಾವಣೆಗೆ ಮೇಯರ್ ಸ್ಥಾನಕ್ಕೆ ಬಿಜೆಪಿಯ ಪ್ರೇಮಾನಂದ ಶೆಟ್ಟಿ ಹಾಗೂ ಕಾಂಗ್ರೆಸ್ ನ ಅನಿಲ್ ಕುಮಾರ್ ನಾಮಪತ್ರ ಸಲ್ಲಿಸಿದ್ದರು. ಈ ಚುನಾವಣೆಯಲ್ಲಿ 60 ಮಂದಿ ಸದಸ್ಯರು, ಸಂಸದರು, ಸ್ಥಳೀಯ ಶಾಸಕರು ಸೇರಿ ಒಟ್ಟು 64 ಮಂದಿ ಗಳ ಬೈಕಿ 62 ಮಂದಿ ಉಪಸ್ಥಿತರಿದ್ದು ಮತ ಚಲಾಯಿಸಿದರು. ಅವರಲ್ಲಿ 46 ಮಂದಿ ಪ್ರೇಮಾನಂದ ಶೆಟ್ಟಿ ಪರವಾಗಿ ಮತ ಚಲಾಯಿಸಿದರೆ, 14 ಮಂದಿ ಅನಿಲ್ ಕುಮಾರ್ ಪರವಾಗಿ ಮತ ಚಲಾಯಿಸಿದರು.
ಇನ್ನು ಉಪ ಮೇಯರ್ ಸ್ಥಾನಕ್ಕೆ ಸುಮಂಗಳಾ ಹಾಗೂ ಜೆಸಿಂತಾ ವಿಜಯ ಆಲ್ಫ್ರೆಡ್ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಸುಮಂಗಳಾ ಪರವಾಗಿ 46 ಹಾಗೂ ಜೆಸಿಂತಾ ಪರವಾಗಿ 14 ಮತಗಳು ಚಲಾವಣೆಯಾದವು. ಈ ಚುನಾವಣೆಯಲ್ಲಿ ಎಸ್ ಡಿಪಿಐ ನ ಇಬ್ಬರು ಸದಸ್ಯರು ತಟಸ್ಥವಾಗುಳಿದರು.
ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಡಾ. ಭರತ್ ಶೆಟ್ಟಿ ಚುನಾವಣಾ ಪ್ರಕ್ರಿಯೆ ಯಲ್ಲಿ ಭಾಗವಹಿಸಿ ಮತ ಚಲಾಯಿಸಿದ್ದು, ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪ ಹಾಗೂ ಉಪ ಆಯುಕ್ತರಾದ ಡಾ.ಸಂತೋಷ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ನೂತನ ಮೇಯರ್ ಆಗಿ ಆಯ್ಕೆಗೊಂಡ ಪ್ರೇಮಾನಂದ ಶೆಟ್ಟಿ ಅವರು ಮಂಗಳಾದೇವಿ ವಾರ್ಡ್ ನಿಂದ ಸತತ 5ನೇ ಬಾರಿಗೆ ಆಯ್ಕೆಗೊಂಡಿದ್ದಾರೆ. ಉಪಮೇಯರ್ ಸುಮಂಗಳ ರಾವ್ ಅವರು ಕುಂಜತ್ತಬೈಲ್ ವಾರ್ಡ್ ನಿಂದ ಎರಡನೇ ಬಾರಿ ಆಯ್ಕೆಗೊಂಡಿದ್ದಾರೆ.