ಎಟಿಎಂ ಸ್ಕಿಮ್ಮಿಂಗ್ ಪ್ರಕರಣ: ಉಡುಪಿಯಲ್ಲೂ ಮೂರು ದಿನ ಕಾರ್ಯಾಚರಿಸಿದ ಖದೀಮರು!
ಉಡುಪಿ: ಕರಾವಳಿಯ ಉಭಯ ಜಿಲ್ಲೆಗಳಲ್ಲಿ ನಡೆದ ಎಟಿಎಂ ಸ್ಕಿಮ್ಮಿಂಗ್ ಪ್ರಕರಣಕ್ಕೆ ಸಂಬಂಧಿಸಿ ಒಂದೇ ತಂಡದಿಂದ ಎರಡೂ ಕಡೆ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಸೈಬರ್ ಪೊಲೀಸರು ಬಂಧಿಸಿದ ಆರೋಪಿಗಳನ್ನು ವಿಚಾರಣೆ ನಡೆಸಿದ ವೇಳೆ ವಿಚಾರ ಬೆಳಕಿಗೆ ಬಂದಿದೆ.
ಆರೋಪಿಗಳು ಉಡುಪಿಯ ಎಟಿಎಂ ಕೇಂದ್ರದಲ್ಲಿ ಮೂರು ದಿನಗಳ ಕಾಲ ಸ್ವಿಮ್ಮಿಂಗ್ ಉಪಕರಣವನ್ನು ಅಳವಡಿಸಿದ್ದರು. ಉಡುಪಿ, ಮಂಗಳೂರಿನ ಹಲವೆಡೆ ಎಟಿಎಂ ಕೇಂದ್ರಗಳಿಂದ ಎಟಿಎಂ ಕಾರ್ಡ್ಗಳ ಮಾಹಿತಿಯನ್ನು ಕದ್ದು ಅದನ್ನು ಲ್ಯಾಪ್ಟಾಪ್ ಮುಖಾಂತರ ಬೇರೊಂದು ಕಾರ್ಡ್ಗಳಿಗೆ ವರ್ಗಾಯಿಸುತ್ತಿದ್ದರು. ಬಳಿಕ ಆ ಕಾರ್ಡ್ಗಳ ಮೂಲಕ ಆರೋಪಿಗಳು ಹಣ ವಿದ್ಡ್ರಾ ಮಾಡುತ್ತಿದ್ದರು.
ಬಂಧಿತರ ಪೈಕಿ ಕೃತ್ಯದ ಪ್ರಮುಖ ಆರೋಪಿ ಗ್ಲಾನ್ ಜಿಂಟೋ ಜಾಯ್ ಮತ್ತು ದಿನೇಶ್ ಸಿಂಗ್ ರಾವತ್ ಮಂಗಳೂರಿನಿಂದ ಬೆಂಗಳೂರಿಗೆ ಮಡಿಕೇರಿ ಮೈಸೂರು ಮಾರ್ಗವಾಗಿ ತೆರಳಿದ್ದು ದಾರಿಯುದ್ದಕ್ಕೂ ಅಲ್ಲಲ್ಲಿ ಅಂಚೆ ಕಚೇರಿ ಎಟಿಎಂ, ಸಹಕಾರಿ ಸಂಸ್ಥೆಗಳ ಎಟಿಎಂ, ಟಿಎಂಬಿ (ತಮಿಳುನಾಡು ಮರ್ಕಂಟೈಲ್ ಬ್ಯಾಂಕ್) ಎಟಿಎಂಗಳಲ್ಲಿ ಹಣ ವಿದ್ಡ್ರಾ ಮಾಡಿದ್ದಾರೆ. ಅನಂತರ ಬೆಂಗಳೂರಿಗೆ ತಲುಪಿ ಅಲ್ಲಿಯೂ ಹಣ ವಿದ್ಡ್ರಾ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಆರೋಪಿಗಳ ವಿರುದ್ಧ ಮಂಗಳೂರಿನ ನಾಗುರಿ, ಚಿಲಿಂಬಿ, ಕುಳಾಯಿ ಹಾಗೂ ಉಡುಪಿಯಲ್ಲಿ ಸ್ಕಿಮ್ಮಿಂಗ್ ಮೂಲಕ ವಂಚನೆ ಸೇರಿದಂತೆ 36ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಅಲ್ಲದೆ ಹೊಸದಿಲ್ಲಿಯಲ್ಲಿಯೂ ಇದೇ ತಂಡ ಸ್ಕಿಮ್ಮಿಂಗ್ ನಡೆಸಿರುವ ವಿಚಾರ ತಿಳಿದು ಬಂದಿದೆ. ಇದರ ಜೊತೆಗೆ ಈ ಕೃತ್ಯದಲ್ಲಿ ಈ ತಂಡದ ಜತೆ ಇನ್ನಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಪೆÇಲೀಸರು ಕಾಸರಗೋಡಿಗೆ ತೆರಳಿ ತನಿಖೆ ಮುಂದುವರಿಸಿದ್ದಾರೆ.
ಸ್ವಿಮ್ಮಿಂಗ್ ನಡೆಸಿ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಮತ್ತು ಮಂಗಳೂರಿನಲ್ಲಿ 80 ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳಲ್ಲಿ ಆರೋಪಿಗಳು 30 ಲ.ರೂ.ಗಳಿಗೂ ಅಧಿಕ ಮೊತ್ತವನ್ನು ವಂಚಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಫೆ. 21ರಂದು ದ.ಕ ಜಿಲ್ಲೆಯ ಮಂಗಳಾದೇವಿಯ ಎಟಿಎಂ ಕೇಂದ್ರವೊಂದರಲ್ಲಿ ಸ್ವಿಮ್ಮಿಂಗ್ ನಡೆಸುತ್ತಿದ್ದಾಗ ಇಬ್ಬರು ಆರೋಪಿಗಳನ್ನು ಪೆÇಲೀಸರು ಸ್ಥಳೀಯ ಪೆಟ್ರೋಲ್ ಬಂಕ್ ಸಿಬಂದಿಯ ಸಹಕಾರದೊಂದಿಗೆ ವಶಕ್ಕೆ ಪಡೆದಿದ್ದರು. ಬಳಿಕ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ ಉಳಿದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಈಗಾಗಲೇ ಬಮಧಿಸಲ್ಟಟ್ಟಿರುವ ಗ್ಲಾಡ್ವಿನ್ ಜಿಂಟೋ ಜಾಯ್, ದಿನೇಶ್ ಸಿಂಗ್ ರಾವತ್, ರಾಹುಲ್ ಮತ್ತು ಮಜೀದ್ ನನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದೀಗ ಪ್ರಕರಣದಲ್ಲಿ ಇನ್ನೂ ಹೆಚ್ಚಿನ ಆರೋಪಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.