ಪುತ್ತೂರು: ದೂರು ಅರ್ಜಿಯೊಂದರ ವಿಚಾರಣೆಯ ವೇಳೆ ದ.ಕ ಜಿಲ್ಲೆಯ ಪುತ್ತೂರು ಮಹಿಳಾ ಠಾಣಾ ಎಸ್.ಐ ಮೇಲೆ ಹಲ್ಲೆ ನಡೆಸಿದ ಇಬ್ಬರು ಮಹಿಳಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಾಲ್ಮರ ಮುದ್ದೋಡಿ ನಿವಾಸಿ ಬೇಬಿ ಡಿಸೋಜ(34), ಹಾಸನ ಚೆನ್ನರಾಯಪಟ್ಟಣದ ಆಶಾ(35) ಬಂಧಿತ ಆರೋಪಿಗಳು.
ಮಹಿಳಾ ಠಾಣಾ ಎಸ್.ಐ ಸೇಸಮ್ಮ ಹಲ್ಲೆಗೊಳಗಾದವರು. ಸಂಬಂಧಿಗಳಾದ ಸುನಿತಾ ಡಿ’ಸೋಜಾ ಹಾಗೂ ಬೇಬಿ ಡಿಸೋಜಾ ಎಂಬಿಬ್ಬರು, ಒಬ್ಬರಿಗೊಬ್ಬರ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಪ್ರತ್ಯೇಕ ದೂರು ನೀಡಿದ್ದರು. ಮಾ.1ರಂದು ಈ ದೂರಿನ ಅರ್ಜಿ ವಿಚಾರಣೆ ವೇಳೆ ಬೇಬಿ ಡಿಸೋಜ ಅವರು ತಮ್ಮ ಅಕ್ಕ, ಹಾಸನದಲ್ಲಿರುವ ಆಶಾ ಅವರ ಜೊತೆಗೂಡಿ ಬಂದಿದ್ದರು. ಕೌಟುoಬಿಕ ಕಲಹದ ಈ ಅರ್ಜಿಯನ್ನು ಎಸ್.ಐ ಅವರು ನಯವಾಗಿ ವಿಚಾರಿಸುತ್ತಿರುವಾಗ ಬೇಬಿ ಡಿಸೋಜಾ ಅವರ ಪತಿ ಲಾರೆನ್ಸ್ ಡಿ’ಸೋಜಾ ಅವರಿಗೆ ಹಲ್ಲೆ ನಡೆಸಲು ಮುಂದಾಗಿದ್ದರು. ಈ ವೇಳೆ ತಡೆಯಲು ಬಂದ ಎಸ್.ಐ ಸೇಸಮ್ಮ ಅವರ ಮೇಲೆ ಬೇಬಿ ಡಿಸೋಜ ಮತ್ತು ಆಕೆಯ ಅಕ್ಕ ಆಶಾ ಅವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಯಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿಯ ನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಘಟನೆಯ ಕುರಿತು ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆಸಿದ ಬೇಬಿ ಡಿಸೋಜ ಮತ್ತು ಆಶಾ ಎಂಬ ಸಹೋದರಿಯರನ್ನು ಪೊಲೀಸರು ಬಂಧಿಸಿದ್ದಾರೆ. | | |