ಸಿದ್ದರಾಮಯ್ಯಗೆ ಬಿಗ್ ರಿಲೀಫ್ ನೀಡಿದ ಸುಪ್ರೀಂಕೋರ್ಟ್

ಬೆಂಗಳೂರು : ನಿಯಮ ಉಲ್ಲಂಘಿಸಿ ಭೂಮಿ ಖರೀದಿಸಿದ್ದಾರೆ ಎಂಬ ಪ್ರಕರಣದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಉಪಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೈಸೂರು ಮಹಾನಗರ ಅಭಿವೃದ್ಧಿ ಪ್ರಾಕಾರ (ಮೂಡಾ)ದ ನಿಯಮಾವಳಿಗಳನ್ನು ಉಲ್ಲಂಘಿಸಿ ಭೂಮಿ ಖರೀದಿಸಿದ್ದಾರೆ ಎಂದು ಆರೋಪಿಸಲಾಗಿದ್ದ ಪ್ರಕರಣವನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಈ ಮೂಲಕ ತಲೆನೋವಾಗಿದ್ದ ಪ್ರಕರಣದಿಂದ  ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮುಕ್ತಿ ಸಿಕ್ಕಂತಾಗಿದೆ. 23 ವರ್ಷಗಳ ಹಿಂದಿನ ಪ್ರಕರಣವನ್ನು ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ, ಎ.ಎಸ್.ಬೋಪಣ್ಣ ಮತ್ತು ವಿ.ಸುಬ್ರಹ್ಮಣ್ಯ ಅವರನ್ನೊಳಗೊಂಡ ವಿಭಾಗೀಯ ಪೀಠ  ವಜಾಗೊಳಿಸಿದೆ.

1997ರಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಮೈಸೂರಿನ ಹಿಂಕಲ್ ಬಳಿ 10ಗುಂಟೆ ಜಮೀನು ಖರೀದಿಸಿದ್ದರು. ಅದರ ಡಿನೋಟಿಫಿಕೇಶನ್ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು. ಜಮೀನಿನ ಮೂಲ ಮಾಲೀಕರಾದ ಸಾಕಮ್ಮ ಮತ್ತು ಇತರರ ಹೆಸರಿಗೆ ಡಿನೋಟಿಫಿಕೇಶನ್ ಆಗಿದೆ. ಆ ಭೂಮಿಯನ್ನು ಸಿದ್ದರಾಮಯ್ಯ ಖರೀದಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಜಮೀನನ್ನು ಮೂಡಾ ಸ್ವಾದೀನ ಪಡಿಸಿಕೊಂಡಿತ್ತು. ಆದರೂ ಅದನ್ನು ಡಿನೋಟಿಫಿಕೇಶನ್ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ನಡುವೆ ಮೂಡಾದಿಂದ ಈ ಭೂಮಿ ಸ್ವಾದೀನ ಆಗಿರುವ ಬಗ್ಗೆ ಸಾಕಷ್ಟು ಗೊಂದಲ ಉಂಟಾಗಿತ್ತು. ಈ ಬಗ್ಗೆ ಕೆಲ ಅಕಾರಿಗಳು ಸ್ವಾದೀನ ಆಗಿದೆ ಎಂದು ಹಿಂಬರಹ ನೀಡಿದರೆ ಮತ್ತೆ ಕೆಲವರು ಸ್ವಾದೀನ ಆಗಿಲ್ಲ ಎಂದು ಹೇಳಿದ್ದರು. ಬಳಿಕ ಕೊನೆಗೆ ಈ ಪ್ರಕರಣ ಸಿದ್ದರಾಮಯ್ಯ ಅವರತ್ತ ತಿರುಗಿತ್ತು. ಗಂಗರಾಜು ಅವರು 2018ರಲ್ಲಿ ಸಿದ್ದರಾಮಯ್ಯ ವಿರುದ್ಧ ದೂರು ಸಲ್ಲಿಸಿದ್ದರು.
  ಈ ಪ್ರಕರಣಕ್ಕೆ ಸಂಬಂದಿಸಿದಂತೆ ವಿಚಾರಣೆ ನಡೆಸಿದ ಪೊಲೀಸರು ಆರೋಪ ದೃಢೀಕರಿಸಲು ಸೂಕ್ತ ಸಾಕ್ಷ್ಯಾದಾರಗಳಿಲ್ಲ ಎಂದು ಬಿ ವರದಿ ಸಲ್ಲಿಸಿ ಪ್ರಕರಣ ಕೈಬಿಟ್ಟಿದ್ದರು. ಆದರೆ, ಗಂಗರಾಜು ಅವರು ಚುನಾಯಿತ ಪ್ರತಿನಿಗಳ ವಿಶೇಷ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರಿಂದ ಅದನ್ನು ಆಧರಿಸಿ ಸಮನ್ಸ್ ನೀಡಲಾಗಿತ್ತು.

ತಮಗೆ ನೀಡಿದ್ದ ಸಮನ್ಸ್‍ನ್ನು ಸಿದ್ದರಾಮಯ್ಯ ಅವರು ಹೈಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು. ಹೈಕೋರ್ಟ್ ಸಿದ್ದರಾಮಯ್ಯ ಅವರ ಪರವಾಗಿ ತೀರ್ಪು ನೀಡಿ ಸಮನ್ಸ್ ವಜಾಗೊಳಿಸಿತ್ತು. ಗಂಗರಾಜು ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿದಾರರ ಪರ ಸುಪ್ರೀಂಕೋರ್ಟ್‍ನ ವಕೀಲ ಎಚ್.ಬಿ.ಶಿವರಾಜು ಸುಮಾರು 20 ನಿಮಿಷ ಕಾಲ ವಾದ ಮಂಡಿಸಿದ್ದರು. ಆದರೆ, ಅರ್ಜಿದಾರರು ಮಾಡಿದ ಆರೋಪಕ್ಕೆ ಪೂರಕ ಸಾಕ್ಷ್ಯಾದಾರಗಳು ಇಲ್ಲದೇ ಇದ್ದುದರಿಂದ ಎಸ್‍ಎಲ್‍ಪಿಯನ್ನು ವಜಾಗೊಳಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ವಕೀಲರಾದ ಶಿವರಾಜು ಅವರು, ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ 513, 408 ಎರಡು ರಿಟ್ ಅರ್ಜಿಗಳನ್ನು ಸುಪ್ರೀಂಕೋರ್ಟ್‍ಗೆ ಸಲ್ಲಿಸಲಾಗಿದ್ದು, ಅವುಗಳ ವಿಚಾರಣೆ ಬಾಕಿ ಇದೆ. ಎಸ್‍ಎಲ್‍ಪಿಗಿಂತಲೂ ಇದು ಗಂಭೀರ ಸ್ವರೂಪದ್ದಾಗಿವೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!