ಕರ್ನಾಟಕದ ಜನತೆ ಗಂಭೀರ ಪರಿಸ್ಥಿತಿ ಎದುರಿಸಲು ಸಿದ್ಧರಾಗಿ: ವೈದ್ಯಕೀಯ ಶಿಕ್ಷಣ ಸಚಿವ
ಯಾದಗಿರಿ: ಕೊರೋನಾ ಹರಡುವಿಕೆ ಮುಂದಿನ ದಿನಗಳಲ್ಲಿ ಗಂಭೀರ ಸ್ವರೂಪ ಪಡೆಯಬಹುದು ಎಂದು ಭಾವಿಸಿ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸೂಚನೆ ನೀಡಿದ್ದಾರೆ.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕೋವಿಡ್-19 ಪರಿಶೀಲನಾ ಸಭೆಯಲ್ಲಿ ಶನಿವಾರ ಅವರು ಮಾತನಾಡಿದರು.
ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಜ್ವರದ ಸೋಂಕು ಕಾಣಿಸಿಕೊಂಡ ಮತ್ತು ಬೇರೆ ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯ ನಾಗರಿಕರ ಟೆಸ್ಟ್ ಮಾಡಬೇಕು ಮತ್ತು ಅವರ ಮೇಲೆ ನಿರಂತರ ನಿಗಾವಹಿಸಬೇಕು ಎಂದು ಸೂಚನೆ ನೀಡಿದರು.
ರಾಜ್ಯದಲ್ಲಿ 6,824 ಪ್ರಕರಣಗಳ ಪೈಕಿ 3,648 ಮಂದಿ ಗುಣಮುಖರಾಗಿದ್ದಾರೆ. ಇನ್ನು 3,092 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ವೇಳೆ 81 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.