‘ಮೋಸ ಹೋದ ಅನುಭವವಾಗಿದೆ’: ಲಸಿಕೆ ದರ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಕಿರಣ್ ಮಜುಂದಾರ್ ಶಾ ಆಕ್ರೋಶ
ಬೆಂಗಳೂರು: ಕೋವಿಡ್ ಲಸಿಕೆ ವಿಚಾರವಾಗಿ ಕೇಂದ್ರ ಸರ್ಕಾರ ನಿಗದಿ ಮಾಡಿರುವ ದರ ತೀರಾ ಕಡಿಮೆಯಾಗಿದ್ದು, ನಮಗೆ ಇದೀಗ ಮೋಸ ಹೋದ ಅನುಭವವಾಗುತ್ತಿದೆ ಎಂದು ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್–19 ಲಸಿಕೆಗೆ 250ರೂ ದರ ಮಿತಿ ವಿಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ ವಿರೋಧಿಸಿದ್ದು, ‘ಲಸಿಕೆಗೆ ನಿಗದಿ ಮಾಡಿರುವ ಬೆಲೆಯು ತೀರಾ ಕಡಿಮೆ. ಲಸಿಕೆ ಕಂಪನಿಗಳಿಗೆ ಮೋಸ ಹೋದಂತಹ ಅನುಭವ ಆಗುತ್ತಿದೆ. ಈ ರೀತಿಯ ನಡೆಗಳ ಮೂಲಕ ನಾವು ಲಸಿಕೆ ಉದ್ಯಮವನ್ನು ಉತ್ತೇಜಿಸುವ ಬದಲು ನಾಶ ಮಾಡುತ್ತಿದ್ದೇವೆ. ಇಂತಹ ನಡೆಗಳು ಉದ್ಯಮಕ್ಕೆ ಒಳ್ಳೆಯದಲ್ಲ, ಈಗಾಗಲೇ ಸ್ವತಃ ವಿಶ್ವ ಆರೋಗ್ಯ ಸಂಸ್ಥೆಯೇ ಪ್ರತೀ ಡೋಸ್ ಗೆ 3 ಅಮೆರಿಕನ್ ಡಾಲರ್ ದರ ನಿಗದಿಗೆ ಅನುಮತಿ ನೀಡಿದೆ. ಆದರೆ ಸರ್ಕಾರ ಅದನ್ನು ಏಕೆ 2 ಡಾಲರ್ ಗೆ ಇಳಿಸಬೇಕಿತ್ತು ಪ್ರಶ್ನಿಸಿದ್ದಾರೆ.
ಲಸಿಕೆ ತಯಾರಕಾ ಸಂಸ್ಥೆಗಳಿಗೆ ಸಬ್ಸಿಡಿ?
ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ಲಸಿಕೆಗೆ 250 ರೂಪಾಯಿಗಳ ಬೆಲೆ ನಿಗದಿಪಡಿಸಿರುವ ಸರ್ಕಾರದ ಕ್ರಮಕ್ಕೆ ಲಸಿಕೆ ತಯಾರಕರು ಅಸಮಾಧಾನ ವ್ಯಕ್ತಪಡಿಸಿದ್ದು, ಸರ್ಕಾರ ಸಬ್ಸಿಡಿ ನೀಡಲು ಚಿಂತನೆ ನಡೆಸಿದೆ ಎನ್ನಲಾಗಿದೆ. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಸರ್ಕಾರ ಲಸಿಕೆ ತಯಾರಕರಿಗೆ ಸಬ್ಸಿಡಿ ನೀಡುವ ಚಿಂತನೆ ನಡೆಸುತ್ತಿದೆ. ಆದರೆ ಸಬ್ಸಿಡಿಯ ವಿವರಗಳು ಲಭ್ಯವಿಲ್ಲ. ಮಾ.1 ರಿಂದ ದೇಶಾದ್ಯಂತ ಹೆಚ್ಚಿನ ವ್ಯಾಪ್ತಿಯಲ್ಲಿ ಕೋವಿಡ್-19 ಲಸಿಕೆ ಅಭಿಯಾನ ಪ್ರಾರಂಭವಾಗುವುದಕ್ಕೂ ಮುನ್ನ ಈ ಬೆಳವಣಿಗೆಯಾಗಿದೆ.