ಕೋವಿಡ್-19 ಲಸಿಕೆ ಹಾಕಿಸಿಕೊಂಡ ಪ್ರಧಾನಿ: ಕೊರೋನಾ ಮುಕ್ತ ಭಾರತ ನಿರ್ಮಾಣಕ್ಕೆ ಕರೆ
ನವದೆಹಲಿ: ಮಾರ್ಚ್ 1, ಸೋಮವಾರ ದೇಶಾದ್ಯಂತ ಕೋವಿಡ್-19 ಸಾಂಕ್ರಾಮಿಕ ವಿರುದ್ಧ ಹೋರಾಡಲು ಎರಡನೇ ಸುತ್ತಿನ ಲಸಿಕಾ ಅಭಿಯಾನ ಬೆಳಗ್ಗೆ 9 ಗಂಟೆಗೆ ಆರಂಭವಾಗಿದೆ.
ಅದಕ್ಕೂ ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಬೆಳಗ್ಗೆ ಎರಡನೇ ಸುತ್ತಿನ ಲಸಿಕೆ ಅಭಿಯಾನದಲ್ಲಿ ಕೋವಿಡ್-19 ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಪುದುಚೆರಿಯ ಸಿಸ್ಟರ್ ಪಿ ನಿವೇದಿತಾ ಅವರು ಭಾರತ್ ಬಯೋಟೆಕ್ ಕಂಪೆನಿ ಅಭಿವೃದ್ಧಿಪಡಿಸಿರುವ ಕೊವಾಕ್ಸಿನ್ ಲಸಿಕೆಯನ್ನು ಪ್ರಧಾನಿ ಮೋದಿಯವರಿಗೆ ಹಾಕಿದ್ದಾರೆ.
ಲಸಿಕೆ ಹಾಕಿಸಿಕೊಂಡ ಬಳಿಕ ಟ್ವೀಟ್ ಮಾಡಿರುವ ಪ್ರಧಾನಿ,ಕೋವಿಡ್-19 ವಿರುದ್ಧ ಜಾಗತಿಕ ಮಟ್ಟದಲ್ಲಿ ಹೋರಾಡಲು ಸಮಯಕ್ಕೆ ಸರಿಯಾಗಿ ಕ್ಷಿಪ್ರವಾಗಿ ನಮ್ಮ ವಿಜ್ಞಾನಿಗಳು ಮತ್ತು ವೈದ್ಯರು ಕೆಲಸ ಮಾಡಿದ್ದಾರೆ. ಎರಡನೇ ಸುತ್ತಿನಲ್ಲಿ ಅರ್ಹರೆಲ್ಲರೂ ಲಸಿಕೆ ಹಾಕಿಸಿಕೊಳ್ಳಿ, ನಾವೆಲ್ಲರೂ ಒಟ್ಟು ಸೇರಿ ಕೋವಿಡ್ ಮುಕ್ತ ಭಾರತ ನಿರ್ಮಿಸೋಣ ಎಂದು ಮನವಿ ಮಾಡಿಕೊಂಡಿದ್ದಾರೆ.
ದೇಶದ ಪ್ರಧಾನ ಸೇವಕ ಎಂದು ಗುರುತಿಸಲ್ಪಟ್ಟಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಏಮ್ಸ್ ನಲ್ಲಿ ಹಾಕಿಸಿಕೊಂಡಿರುವ ಕೊವಾಕ್ಸಿನ್ ವಿಡಿಯೊ ಮತ್ತು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಬೆಳಗ್ಗೆಯಿಂದಲೇ ಬಹಳ ಹರಿದಾಡುತ್ತಿದೆ. ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೊವಾಕ್ಸಿನ್ ಬಗ್ಗೆ ಅನೇಕ ವದಂತಿಗಳು ಹಬ್ಬಿದ್ದವು. ಹಲವರು ಲಸಿಕೆ ಹಾಕಿಸಿಕೊಳ್ಳಲು ಭಯದಿಂದ ಹಿಂದೇಟು ಹಾಕುತ್ತಿದ್ದರು. ಇದೀಗ ಪ್ರಧಾನ ಮಂತ್ರಿಯವರೇ ಹಾಕಿಸಿದ್ದು ಹಲವರು ಭಯ, ಆತಂಕ ಸಂಶಯವನ್ನು ದೂರ ಮಾಡಿದೆ ಎನ್ನಬಹುದು.
6೦ ವರ್ಷ ದಾಟಿದ ಹಿರಿಯ ನಾಗರಿಕರು ಮತ್ತು 45 ವರ್ಷ ತುಂಬಿದ್ದು, ಗಂಭೀರ ಆರೋಗ್ಯ ಸಮಸ್ಯೆ ಇರುವವರಿಗೆ ಇಂದಿನಿಂದ ದೇಶಾದ್ಯಂತ ಎರಡನೇ ಸುತ್ತಿನ ಕೋವಿಡ್-19 ಲಸಿಕಾ ಆಂದೋಲನ ಆರಂಭವಾಗಿದೆ. ಇಂದು ಬೆಳಗ್ಗೆ 9 ಗಂಟೆಗೆ ಲಸಿಕಾ ನೋಂದಣಿ ಆರಂಭವಾಗಿದ್ದು, ಸಾರ್ವಜನಿಕರು ಡಬ್ಲ್ಯುಡಬ್ಲ್ಯುಡಬ್ಲ್ಯು.ಕೊವಿನ್.ಗವ್.ಇನ್ ಅಥವಾ ಕೊವಿನ್ 2 ಅಥವಾ ಆರೋಗ್ಯ ಸೇತು ಪೋಟರ್ಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.