ತ.ನಾ.,ಕೇರಳ,ಬಂಗಾಳ, ಅಸ್ಸಾಂ,ಪುದುಚೇರಿ ಚುನಾವಣೆ ದಿನಾಂಕ ಘೋಷಣೆ – ಮೇ 2 ಫಲಿತಾಂಶ!
ನವದೆಹಲಿ: ಕೇಂದ್ರ ಚುನಾವಣಾ ಆಯೋಗ ತಮಿಳುನಾಡು, ಕೇರಳ, ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಿದ್ದು ಮೇ 2ರಂದು ಫಲಿತಾಂಶ ಹೊರಬೀಳಲಿದೆ.
ತಮಿಳುನಾಡು(234 ಕ್ಷೇತ್ರ), ಕೇರಳ(140 ಕ್ಷೇತ್ರ), ಪುದುಚೇರಿ(30 ಕ್ಷೇತ್ರ)ಯಲ್ಲಿ ಒಂದೇ ಹಂತದಲ್ಲಿ ಏಪ್ರಿಲ್ 6ರಂದು ಚುನಾವಣೆ ನಡೆಯಲಿದೆ. ಇನ್ನು ಪಶ್ಚಿಮ ಬಂಗಾಳ(294 ಕ್ಷೇತ್ರ)ದಲ್ಲಿ ಎಂಟು ಹಂತದಲ್ಲಿ ಚುನಾವಣೆ ನಡೆಯಲಿದೆ. ಇದೇ ವೇಳೆ ಅಸ್ಸಾಂ(126 ಕ್ಷೇತ್ರ)ನಲ್ಲಿ ಮೂರು ಹಂತದಲ್ಲಿ ಚುನಾವಣೆ ನಡೆಯಲಿದೆ.
ಒಟ್ಟಾರೆ 824 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು 18.68 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ. ಕೇಂದ್ರಾಡಳಿತ ಪ್ರದೇಶ ಪುದುಚೇರಿ ಮತ್ತು ನಾಲ್ಕು ರಾಜ್ಯಗಳ ಚುನಾವಣೆಗಾಗಿ 2.7 ಲಕ್ಷ ಮತ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಚುನಾವಣಾ ಆಯೋಗ ಮುಖ್ಯಸ್ಥ ಸುನೀಲ್ ಅರೋರಾ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಎಂಟು ಹಂತದಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 27ರಂದು ಮೊದಲ ಹಂತ, ಏಪ್ರಿಲ್ 1ರಂದು ಎರಡನೇ ಹಂತ, ಏಪ್ರಿಲ್ 6ರಂದು ಮೂರನೇ ಹಂತ, ಏಪ್ರಿಲ್ 10ರಂದು ನಾಲ್ಕನೇ ಹಂತ, ಏಪ್ರಿಲ್ 17ರಂದು ಐದನೇ ಹಂತ, ಏಪ್ರಿಲ್ 22 ಆರನೇ ಹಂತ, ಏಪ್ರಿಲ್ 26ರಂದು ಏಳನೇ ಹಂತ, ಏಪ್ರಿಲ್ 29ರಂದು ಎಂಟನೇ ಹಂತದ ಮತದಾನ ನಡೆಯಲಿದೆ.
ಅಸ್ಸಾಂನಲ್ಲಿ ಮೂರು ಹಂತದಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 27ರಂದು ಮೊದಲ ಹಂತ, ಏಪ್ರಿಲ್ 1ರಂದು ಎರಡನೇ ಹಂತ, ಏಪ್ರಿಲ್ 6ರಂದು ಮೂರನೇ ಹಂತದ ಚುನಾವಣೆ ನಡೆಯಲಿದೆ.