ಟ್ಯಾಂಕರ್ ಗಳ ಮುಖಾಮುಖಿ ಡಿಕ್ಕಿ: ತಪ್ಪಿದ ಬೃಹತ್ ದುರಂತ!
ಮಂಗಳೂರು: ಗ್ಯಾಸ್ ಟ್ಯಾಂಕರ್ ಮತ್ತು ಡೀಸೆಲ್ ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿರುವ ಘಟನೆ ಕಡಬ ತಾಲೂಕಿನ ನೆಲ್ಯಾಡಿಯ ಹೊಸಮಜಲು ಸಮೀಪ ನಡೆದಿದೆ. ಘಟನೆಯಿಂದ ಎರಡೂ ಟ್ಯಾಂಕರ್ ಗಳ ಚಾಲಕರಿಗೂ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳೂರಿನಿಂದ ಬೆಂಗಳೂರು ಕಡೆಗೆ ಸಂಚರಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ಕೋಲಾರದಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಡೀಸೆಲ್ ಟ್ಯಾಂಕರ್ ನಡುವೆ ಹೊಸಮಜಲುವಿನಲ್ಲಿ ಮುಖಾಮುಖಿ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಅದೃಷ್ಟವಶಾತ್ ಗ್ಯಾಸ್ ಸೋರಿಕೆಯಾಗದ ಕಾರಣ ಸಂಭಾವ್ಯ ಭಾರಿ ಅನಾಹುತ ತಪ್ಪಿದೆ. ಟ್ಯಾಂಕರ್ ಗಳು ಮುಖಾಮುಖಿ ಡಿಕ್ಕಿ ಹೊಡರದ ರಭಸಕ್ಕೆ ಎರಡು ಟ್ಯಾಂಕರ್ ಗಳ ಮುಂಭಾಗ ನಜ್ಜುಗುಜ್ಜಾಗಿದೆ. ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ. ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.