ಕುಂದಾಪುರ: ವಿದ್ಯಾರ್ಥಿಗಳ ಬಾಕಿ ಶುಲ್ಕ ₹70 ಲಕ್ಷ ಮನ್ನಾ ಮಾಡಿದ ಶಾಸಕ ಸುಕುಮಾರ ಶೆಟ್ಟಿ
ಕುಂದಾಪುರ: ಕೋವಿಡ್ ಸಂಕಷ್ಟದ ದಿನಗಳಲ್ಲಿ ರಾಜ್ಯದಾದ್ಯಂತ ಆನ್‌ಲೈನ್ ಶಿಕ್ಷಣ ಸೇರಿದಂತೆ ಶಿಕ್ಷಣ ಸಂಸ್ಥೆಗಳ ಶುಲ್ಕ ವಸೂಲಾತಿಯಿಂದ ಪೋಷಕರು ಕಂಗಾಲಾಗಿರುವ ಸುದ್ದಿಗಳ ಸಂದರ್ಭದಲ್ಲಿ ‘ಕುಂದಾಪುರ ಎಜುಕೇಶನ್ ಸೊಸೈಟಿ’ಯು ತನ್ನ 4 ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಶಾಲಾ ಬಾಕಿ ಶುಲ್ಕದಲ್ಲಿ ₹70 ಲಕ್ಷ ಮೊತ್ತವನ್ನು ಮನ್ನಾ ಮಾಡಲು ನಿರ್ಧರಿಸಿದೆ.
ಸೊಸೈಟಿಯ ಅಧೀನದಲ್ಲಿ ಎಲ್‌ಕೆಜಿಯಿಂದ ಪದವಿವರೆಗೆ ಶಿಕ್ಷಣ ನೀಡುವ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜು, ವಿಕೆಆರ್ ಆಚಾರ್ಯ ಆಂಗ್ಲ ಮಾಧ್ಯಮ ಶಾಲೆ ಹಾಗೂ ಎಚ್‌ಎಂಎಂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗಳಿದ್ದು, 4,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಬಾಕಿ ಶುಲ್ಕದಲ್ಲಿ ₹70 ಲಕ್ಷ ಮನ್ನಾ: ಪ್ರತಿ ಶೈಕ್ಷಣಿಕ ವರ್ಷದಲ್ಲಿ 4 ತ್ರೈ ಮಾಸಿಕಗಳಲ್ಲಿ ಶುಲ್ಕ ಪಡೆಯಲಾಗುತ್ತದೆ. ಬಾಕಿ ಶುಲ್ಕವನ್ನು ಪರೀಕ್ಷಾ ಅವಧಿಯ ಕೊನೆಯ ತ್ರೈಮಾಸಿಕದಲ್ಲಿ ತುಂಬಲು ಅವಕಾಶ ನೀಡಲಾಗುತ್ತದೆ.
ಶುಲ್ಕ ಮನ್ನಾ ಕುರಿತು ಮಾತನಾಡಿದ ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷ, ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ‘ಜನರು ಕೋವಿಡ್–19 ಕಾರಣದಿಂದಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ನಮ್ಮ ಸೊಸೈಟಿಯ 4 ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಪೋಷಕರು ತೊಂದರೆಯಲ್ಲಿದ್ದಾರೆ. ಹೀಗಾಗಿ ಶೈಕ್ಷಣಿಕ ವರ್ಷದ ಕೊನೆಯ ಅವಧಿಯಲ್ಲಿ ವಿದ್ಯಾರ್ಥಿಗಳಿಂದ ಸಂಸ್ಥೆಗೆ ಬರಬೇಕಾಗಿರುವ ₹1.50 ಕೋಟಿ ಶಾಲಾ ಶುಲ್ಕದಲ್ಲಿ ಅಂದಾಜು ₹70 ಲಕ್ಷ ಮೊತ್ತವನ್ನು ಮನ್ನಾ ಮಾಡಲು ನಿರ್ಧರಿಸಲಾಗಿದೆ.
ತಂದೆ–ತಾಯಿ ಇಲ್ಲದ ವಿದ್ಯಾರ್ಥಿಗಳಿಗೆ ಬಾಕಿ ಶುಲ್ಕದಲ್ಲಿ ಸಂಪೂರ್ಣ ಮನ್ನಾ, ತಂದೆ ಅಥವಾ ತಾಯಿ ಒಬ್ಬರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಶೇ 50 ಮನ್ನಾ, ಬಡ ಕುಟುಂಬದ ವಿದ್ಯಾರ್ಥಿಗಳಿಗೂ ವಿಶೇಷ ರಿಯಾಯಿತಿಯನ್ನು ನೀಡಲಾಗುತ್ತದೆ. ಆದರೆ ಹಣಕಾಸು ಸ್ಥಿತಿ ಉತ್ತಮ ಇರುವ ಪೋಷಕರಿಂದ ಪೂರ್ಣ ಶುಲ್ಕ ಪಡೆದುಕೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
‘ಶಿಕ್ಷಕರು, ಸಿಬ್ಬಂದಿಯ ಸಂಬಳ, ಶಾಲೆ, ವಾಹನಗಳ ನಿರ್ವಹಣೆ ಹಾಗೂ ಇತರ ಖರ್ಚುಗಳು ಸೇರಿ ಪ್ರತಿ ತಿಂಗಳು ಅಂದಾಜು ₹45 ಲಕ್ಷಗಳ ವರೆಗೆ ಸೊಸೈಟಿಗೆ ಖರ್ಚು ಬರುತ್ತಿದೆ.ಯಾವೊಬ್ಬ ವಿದ್ಯಾರ್ಥಿ ಅಥವಾ ಪೋಷಕರಿಂದ ಬಲವಂತದಿಂದ ಶಾಲಾ ಶುಲ್ಕವನ್ನು ವಸೂಲಿ ಮಾಡುವುದಿಲ್ಲ.
ಬೈಂದೂರು ಹಾಗೂ ಕುಂದಾಪುರ ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎನ್ನುವ ಗುರಿಯನ್ನು ಹೊಂದಿರುವ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಪೋಷಕರಿಗೆ ಕೊರೊನಾ ಸಂಕಷ್ಟದಿಂದಾಗಿ ಶುಲ್ಕ ಪಾವತಿ ಅಸಾಧ್ಯವಾದಲ್ಲಿ ಆರ್ಥಿಕ ಸಂಸ್ಥೆಯಿಂದ ಸಾಲ ಪಡೆದಾದರೂ ಒಳ್ಳೆಯ ಶಿಕ್ಷಣ ನೀಡಬೇಕು ಎನ್ನುವ ಬದ್ಧತೆಯನ್ನು ಆಡಳಿತ ಮಂಡಳಿ ಹೊಂದಿದೆ’ ಎಂದು ಬಿ.ಎಂ.ಸುಕುಮಾರ ಶೆಟ್ಟಿ ತಿಳಿಸಿದ್ದಾರೆ.