ಉಡುಪಿಯಲ್ಲೆ ತಯಾರಾಯಿತು ‘ಸೀ ಪ್ಲೇನ್’- 8 ಯುವ ಪ್ರತಿಭೆಗಳ ದಶಕದ ಪರಿಶ್ರಮ!

ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಮೊದಲ ಸೀ ಪ್ಲೇನ್ ನ್ನು ಗುಜರಾತ್‍ನಲ್ಲಿ ಉದ್ಘಾಟಿಸಿದ್ದರು. ಈ ಬಗ್ಗೆ ನಾವೆಲ್ಲಾ ಮಾಧ್ಯಮಗಳ ಮೂಲಕ ಕೇಳಿ ತಿಳಿದುಕೊಂಡಿದ್ದೇವೆ. ಆದರೆ ಅದು, ವಿದೇಶದಿಂದ ಖರೀದಿಸಿದ ವಿಮಾನವಾಗಿತ್ತು. ಆದರೆ ಇದೀಗ ನಮ್ಮದೇ ದೇಶದಲ್ಲಿ ಅದರಲ್ಲೂ ಕರಾವಳಿಯ ಉಡುಪಿಯಲ್ಲಿ ಯುವ ಪ್ರತಿಭೆಗಳು ಮೈಕ್ರೋಲೈಟ್ ಸೀ ಪ್ಲೇನ್ ನ್ನು ತಯಾರಿಸಿದ್ದು, ಈ ಮೂಲಕ ದೇಶಕ್ಕೊಂದು ಕೊಡಗೆ ನೀಡಲು ಮುಂದಾಗಿದ್ದಾರೆ.

ಹೌದು… ಮೇಕ್ ಇನ್ ಇಂಡಿಯಾ ಮತ್ತು ಆತ್ಮ ನಿರ್ಭರದ ಪರಿಕಲ್ಪನೆಯಲ್ಲಿ ಉಡುಪಿಯ ಉತ್ಸಾಹಿ ಯುವ ಪ್ರತಿಭೆಗಳ ತಂಡ ಸೀ ಪ್ಲೇನ್ ಸಿದ್ಧ ಪಡಿಸಿದೆ. ಒಬ್ಬ ವ್ಯಕ್ತಿ ಕುಳಿತು ನೀರಲ್ಲಿ ತೇಲುವ ಬಾನಲ್ಲಿ ಹಾರುವ ಮೈಕ್ರೋಲೈಟ್ ಸೀ ಪ್ಲೇನ್ ಉಡುಪಿಯ ಹೆಜಮಾಡಿಯ ಶಾಂಭವಿ ನದಿಯಲ್ಲಿ ಯಶಸ್ವಿ ಹಾರಾಟ ಕೂಡಾ ನಡೆಸಿದೆ.

ಈ ಆವಿಷ್ಕಾರದ ಮಾಸ್ಟರ್ ಮೈಂಡ್ ಹೆಜಮಾಡಿ ನಡಿಕುದ್ರು ನಿವಾಸಿ ಪುಷ್ಪರಾಜ್ ಅಮೀನ್ ಅವರದ್ದು, ಏರ್ ಮಾಡೆಲಿಂಗ್, ಎನ್ ಸಿಸಿ ಇನ್ ಸ್ಟ್ರಕ್ಟರ್ ಆಗಿರುವ ಪುಷ್ಪರಾಜ್ ಅವರು, ತಮ್ಮ ಕನಸಿನ ಕೂಸಾಗಿರುವ ಈ ಸೀ ಪ್ಲೇನ್ ಗಾಗಿ ಏರೋನಾಟಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನೊಳಗೊಂಡ ಎಂಟು ಉತ್ಸಾಹಿ ಯುವ ಪ್ರತಿಭೆಗಳ ತಂಡವನ್ನು ಕಟ್ಟಿಕೊಂಡು 10 ವರ್ಷಗಳ ಕಾಲ ಪರಿಶ್ರಮ ಪಟ್ಟು ಮೈಕ್ರೋಲೈಟ್ ಸೀ ಪ್ಲೇನ್ ಸಿದ್ಧಪಡಿಸಿದ್ದಾರೆ.

ಇದೀಗ ಈ ಉತ್ಸಾಹಿ ತಂಡದ ಪರಿಶ್ರಮ ಪ್ರತಿಫಲವಾಗಿ  “ಧೃತಿ” ಅನ್ನೋ ಸಂಸ್ಥೆ ಹೆಸರಿನಡಿಯಲ್ಲಿ ನದಿಯಲ್ಲಿ ತೇಲುತ್ತಾ ಹೋಗಿ, ಆಗಸದಲ್ಲಿ ಹಾರುವ ಸೀ ಪ್ಲೇನ್ ಸಿದ್ದಗೊಂಡಿದೆ.  ಸದ್ಯ ಪೈಲೆಟ್ ಮಾತ್ರ ಕುಳಿತು ಹಾರುವ ವಿಮಾನ ಇದಾಗಿದ್ದು, ಏರೋನಾಟಿಕಲ್ ವಿದ್ಯಾರ್ಥಿಗಳಿಗೆ ಪ್ರ್ಯಾಕ್ಟಿಕಲ್ ಕ್ಲಾಸ್ ಕೊಡುವ ಜೊತೆ ಜೊತೆಗೆ ಮುಂದಿನ ದಿನಗಳಲ್ಲಿ ಏಳು ಜನ ಹಾರುವ ತಾಕತ್ತಿನ ವಿಮಾನ ತಯಾರು ಮಾಡುವ ಕನಸು ಇಟ್ಟುಕೊಂಡಿದ್ದಾರೆ ಇವರು.

 ಏರ್ ಕ್ರಾಫ್ಟ್ ಗ್ರೇಡ್ ಅಲುಮೀನಿಯಂ, ಸ್ಟೀಲ್ ನಿಂತ ಗಟ್ಟಿಯಾಗಿರುವ ಸ್ಪೆಷಲ್ ನೈಲಾನ್ ಬ್ರೈಡೆಡ್ ರೋಪ್, ನೈಲಾನ್ ಫ್ಯಾಬ್ರಿಕ್ ಕ್ಲೋತ್, 33 ಎಚ್ ಪಿ ಪವರ್ ಇರುವ 200 ಸಿಸಿ ಸಿಮೊನಿನಿ ಇಟಾಲಿಯನ್ ಎಂಜಿನ್, 53 ಇಂಚ್‍ನ ಮರದ ಫ್ರೊಫೆಲ್ಲರ್, ಬಳಸಿ ವಿಮಾನ ತಯಾರಿಸಿದ್ದಾರೆ. ಈ ವಿಮಾನ ಸ್ಪೀಡ್ ಪೆಟ್ರೋಲ್ ಬಳಸಿ ನದಿಯಲ್ಲಿ ವೇಗವಾಗಿ ಓಡಿ ಆಗಸದಲ್ಲಿ ಹಾರುತ್ತದೆ.      ಮನೆಯ ತೋಟದಲ್ಲೇ ವಿದ್ಯಾರ್ಥಿಗಳ ಜೊತೆಗೂಡಿ ಪುಷ್ಪರಾಜ್ ಅವರು ಮೈಕ್ರೋ ಲೈಟ್ ಸೀ ಪ್ಲೈನ್ ತಯಾರಿಸಿದ್ದು, ಇದರ ನಿರ್ಮಾಣಕ್ಕೆ ಸುಮಾರು ಏಳು ಲಕ್ಷ ರೂ. ಖರ್ಚು ತಗುಲಿದೆ. ಈ ನೂತನ ಆವಿಷ್ಕಾರಕ್ಕೆ ಸ್ಪಂದಿಸಿದ ತಂಡದ ಸದಸ್ಯರ ಸಂಬಂಧಿಕರೆ ಸಹಾಯಧನ ನೀಡಿ ಸಹಕರಿಸುವ ಮೂಲಕ ಈ ವಿದ್ಯಾರ್ಥಿಗಳ ಕಾರ್ಯಕ್ಕೆ ಬೆನ್ನುತಟ್ಟಿದ್ದಾರೆ.

ಇದೀಗ ತಮ್ಮ ಮುಂದಿನ ಆವಿಷ್ಕಾರಗಳ ಸಹಕಾರಕ್ಕಾಗಿ ಸರಕಾರಕ್ಕೆ ಮನವಿ ಮಾಡಿಕೊಂಡಿರುವ ಈ ತಂಡ , ರಾಜ್ಯ ಮತ್ತು ಕೇಂದ್ರ ಸರ್ಕಾರ ನಡಿಕುದ್ರುವಿನಲ್ಲಿ ಒಂದು ವರ್ಕ್ ಶಾಪ್ ವ್ಯವಸ್ಥೆ ಮಾಡಿಕೊಡಬೇಕು. ಸರ್ಕಾರ ಈ ಶೋಧನೆಗೆ, ಯುವಕರ ತಂಡದ ಸಾಧನೆಗೆ ಬೆನ್ನೆಲುವಾಗಿ ನಿಲ್ಲಬೇಕು. ಅನ್ವೇಷಣೆಗೆ ಬೇಕಾದ ಕೆಲ ಟೂಲ್ಸ್ ಗಳಿಗೆ ಸಹಾಯಧನ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.

ಈ ಸೀ ಪ್ಲೇನ್‍ಗಳು ಪ್ರವಾಸೋದ್ಯಮ, ನೆರೆ ಸಂದರ್ಭ ಸಾರ್ವಜನಿಕ ರಕ್ಷಣೆ, ದೇಶದ ರಕ್ಷಣೆಗೆ ಬಳಕೆಯಾಗುತ್ತದೆ. ಈ ಸೀ ಪ್ಲೇನ್ ನಿಂದ ಇಷ್ಟೆಲ್ಲಾ ಅನುಕೂಲಗಳಿರುವಾಗ. ಇದರ ತಯಾರಿಗೆ  ಸರಕಾರ ಆರ್ಥಿಕ ಶಕ್ತಿ ನೀಡಿದರೆ ಆತ್ಮ ನಿರ್ಭರದ ಕನಸಿಗೆ ಒಂದು ಅರ್ಥ ಬರುತ್ತದೆ. ಅಲ್ಲದೆ ಭಾರತದಲ್ಲಿಯೆ ಸ್ವದೇಶಿ ನಿರ್ಮಾಣದ ಸೀ ಪ್ಲೇನ್ ಯಶಸ್ವಿಯಾಗಿ ತಯಾರಾಗುವುದರಲ್ಲಿ ಯವುದೇ ಸಂಶಯವಿಲ್ಲ. 

Leave a Reply

Your email address will not be published. Required fields are marked *

error: Content is protected !!