ಅವಿಭಕ್ತ ಕುಟುಂಬ ಪದ್ಧತಿಯಲ್ಲಿ ಸಹಬಾಳ್ವೆಗೆ ಹೆಚ್ಚಿನ ಒತ್ತು: ಪ್ರೊ.ಭಾಸ್ಕರ ಶೆಟ್ಟಿ
- ಶಿರ್ವ: ತುಳುನಾಡಿನ ಅವಿಭಕ್ತ ಕುಟುಂಬ ಪದ್ಧತಿಯಲ್ಲಿ ಸಹಬಾಳ್ವೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿತ್ತು. ಕುಟುಂಬ ಪದ್ಧತಿಯ ಜೊತೆಗೆ ತುಳುನಾಡಿನ ದೈವಗಳ ಆರಾಧನೆ ಕೂಡಾ ಊರಿನ ಹತ್ತು ಸಮಸ್ತರ ಕೂಡುವಿಕೆಯೊಂದಿಗೆ ಸಾಂಗವಾಗಿ ನಡೆಯುತ್ತಿತ್ತು. ಇಂದಿನ ಯುವಜನತೆಗೆ ತುಳುನಾಡಿನ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ತಿಳುವಳಿಕೆಯನ್ನು ನೀಡುವ ಕೆಲಸ ಹೆತ್ತವರು ಮಾಡಬೇಕು ಎಂದು ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ ಭಾಸ್ಕರ ಶೆಟ್ಟಿ ತಿಳಿಸಿದ್ದಾರೆ.
ಬೆಳ್ಳೆಯ ದೆಂದೂರು ಪಂಜುರ್ಲಿ ದೈವಸ್ಥಾನದಲ್ಲಿ ಹಿರಿಯ ಸಾಹಿತಿ ದಯಾನಂದ ಕೆ.ಶೆಟ್ಟಿ ದೆಂದೂರು ಅವರು ಬರೆದ ದೆಂದೂರು ಪಂಜುರ್ಲಿ ಕೃತಿಯ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಡಾ.ಎ.ರವೀಂದ್ರನಾಥ ಶೆಟ್ಟಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಮನುಷ್ಯ ತನ್ನ ಜೀವಿತಾವಧಿಯಲ್ಲಿ ಸ್ವಾರ್ಥವನ್ನು ಬದಿಗೊತ್ತಿ ಬೇರೆಯವರ ಹಿತಕ್ಕಾಗಿ ದುಡಿದಾಗ ಮಾತ್ರ ಜೀವನದಲ್ಲಿ ಸಾರ್ಥಕತೆಯನ್ನು ಕಾಣಲು ಸಾಧ್ಯ. ದೆಂದೂರು ಪಂಜುರ್ಲಿಯ ಕಾರ್ನಿಕವನ್ನು ಯುವಪೀಳಿಗೆಗೆ ತಿಳಿಸಿಕೊಡುವ ಪ್ರಯತ್ನ ಮಾಡಿರುವ ದಯಾನಂದ ಕೆ.ಶೆಟ್ಟಿ ದೆಂದೂರು ಅವರಿಂದ ಇನ್ನಷ್ಟು ಕೃತಿಗಳು ಮೂಡಿಬರುವಂತಾಗಲಿ ಎಂದವರು ಆಶಿಸಿದರು.
ಬ್ರಹ್ಮಾವರದ ಉದ್ಯಮಿ ಚೇತನ್ ಕುಮಾರ್ ಶೆಟ್ಟಿ, ಮುಂಬೈಯ ಉದ್ಯಮಿ ರಾಮಣ್ಣ ಶೆಟ್ಟಿ, ಶ್ರೀರಸ್ತು ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಾಮ್ ವಿ.ಕುಂದರ್, ಕಳತ್ತೂರು ಸಮಾಜಸೇವಾ ವೇದಿಕೆ ಸಂಚಾಲಕ ದಿವಾಕರ ಶೆಟ್ಟಿ ಕಳತ್ತೂರು, ವಿಜಯಕುಮಾರ್ ಶೆಟ್ಟಿ ಪಡುಮನೆ, ಸುಧಾಕರ ಶೆಟ್ಟಿ ದೆಂದೂರು ಸಾನದಮನೆ, ರಾಮಣ್ಣ ಶೆಟ್ಟಿ ಕೆಳಪಡುಮನೆ, ದಯಾನಂದ ಶೆಟ್ಟಿ ಮೂಡುಮನೆ, ಸಚಿನ್ ಶೆಟ್ಟಿ ಕಂಚಿಕರಿಯ ಕೆಳಮನೆ, ಶೇಖರ ಸುವರ್ಣ ನಟ್ಟಿಲ್ಲುಮನೆ, ರಾಜೇಂದ್ರ ಶೆಟ್ಟಿ ಬೆಳ್ಳೆ, ಸಂತೋಷ್ ಶೆಟ್ಟಿ ಸಾಯಿಕೃಷ್ಣ ಕೆಳಪಡುಮನೆ, ಶಿವಪ್ರಸಾದ್ ಶೆಟ್ಟಿ ಹಿರಿಯಡ್ಕ, ರಮಾನಾಥ್ ಶೆಟ್ಟಿ ಪಡುಮನೆ ಮತ್ತಿತರರು ಉಪಸ್ಥಿತರಿದ್ದರು. ಕೃತಿಕಾರ ದಯಾನಂದ ಕೆ.ಶೆಟ್ಟಿ ದೆಂದೂರು ಸ್ವಾಗತಿಸಿದರು. ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು. ಸಾಹಿತಿ ನಾಗರಾಜ್ ಗುರುಪುರ ವಂದಿಸಿದರು.