ಉಡುಪಿ: ಕಾಂಗ್ರೆಸ್ ಮುಖಂಡ, ಗ್ರಾಪಂ ಸದಸ್ಯನ ಮನೆಗೆ ನುಗ್ಗಿ ಕಾರು ಪುಡಿಗಟ್ಟಿ ಜೀವ ಬೆದರಿಕೆ
ಉಡುಪಿ: ಉಪ್ಪೂರು ಸೊಸೈಟಿಯ ಅಧ್ಯಕ್ಷ, ಸಮಾಜಸೇವಕ ಹಾಗೂ ಹಾವಂಜೆ ಗ್ರಾಮ ಪಂಚಾಯತ್‍ನ ಸದಸ್ಯ ರಮೇಶ್ ಎನ್, ಶೆಟ್ಟಿ ಕುಕ್ಕೆಹಳ್ಳಿ ಅವರಿಗೆ ಜೀವ ಬೆದರಿಕೆಯೊಡ್ಡಿರುವ ಕುರಿತಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೆ.23ರ ರಾತ್ರಿ 10.30ರ ಸುಮಾರಿಗೆ ಮನೆಗೆ ಬಂದ ಕೆಲವರು ಮನೆಗೆ ಮತ್ತು ಇವರ ವಾಹನಕ್ಕೆ ಹಾನಿಯನ್ನು ಮಾಡಿದ್ದು ಅಲ್ಲದೆ ಮನೆಯ ಗೇಟಿನ ನ ಲೈಟ್ ಗಳನ್ನು ಒಡೆದು ಹಾಕಿದ್ದಾರೆ . ಇದರ ಜೊತೆಗೆ ರಮೇಶ್ ಗೆ ಜೀವ ಬೆದರಿಕೆಯನ್ನು ಹಾಕಿದ್ದಾರೆ ಎಂದು ದೂರಲಾಗಿದೆ.
ಈ ಕೃತ್ಯದಲ್ಲಿ ಮಾಜಿ ಸದಸ್ಯ, ಹಾವಂಜೆ ಗ್ರಾಮದ ಪಿಡಬ್ಲ್ಯೂಡಿ ಗುತ್ತಿಗೆದಾರ ಮತ್ತು ಕುಕ್ಕೆಹಳ್ಳಿ ಗ್ರಾಮಪಂಚಾಯಿತಿಯ ರಾಜಕೀಯ ವಿರೋಧಿಗಳು ಈ ದಾಳಿಯಲ್ಲಿ ಇರುವುದು ಮೇಲ್ನೋಟಕ್ಕೆ ಗೊತ್ತಾಗಿರುತ್ತದೆ. ಪೊಲೀಸ್ ಇಲಾಖೆ ಕೂಡಲೇ ಇವರೆಲ್ಲರನ್ನೂ ಬಂಧಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇಂದು ಬೆಳಿಗ್ಗೆ ಸ್ಥಳ ಮಹಜರು ಮಾಡಲಾಗಿದೆ.
ಇನ್ನು ಈ ಪ್ರಕರಣವನ್ನು ಖಂಡಿಸಿರುವ ಕೇಂದ್ರದ ರಾಜ್ಯಸಭಾ ಸದಸ್ಯರಾದ ಆಸ್ಕರ್ ಫೆರ್ನಾಂಡಿಸ್, ಎಮ್. ಎ,ಗಫೂರ್, ಸ್ಥಳೀಯರಾದ ರಾಜ್ಯ ಯುವ ಕಾಂಗ್ರೆಸ್ ನ ಮಾಜಿ ಕಾರ್ಯದರ್ಶಿ ಜಯಶೆಟ್ಟಿ ಬನ್ನಂಜೆ ಅವರು ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಮುಖಂಡ ರಮೇಶ್ ಎನ್. ಶೆಟ್ಟಿ ಕುಕ್ಕೆಹಳ್ಳಿ ಅವರಿಗೆ ಜೀವ ಬೆದರಿಕೆ ಒಡ್ಡಿರುವುದು ರಾಜಕೀಯ ಪ್ರೇರಿತವಾಗಿದೆ. ಈ ಬಗ್ಗೆ ಸಂಬಂಧಪಟ್ಟವರನ್ನು ಕೂಡಲೇ ಬಂಧಿಸಬೇಕು ಆಗ್ರಹಿಸಿದ್ದಾರೆ.