ಉದ್ಯಾವರ: ದಾಸ್ತಾನು ಗೋಡೌನಿನ ಪರವಾನಿಗೆ ರದ್ದು ಮಾಡಬೇಡಿ – ಕಾರ್ಮಿಕರ ಮನವಿ

ಉಡುಪಿ: ಉದ್ಯಾವರ ಪಿತ್ರೋಡಿ, ಸಂಪಿಗೆನಗರ, ಕಡೆಕಾರು, ಕಿದಿಯೂರು, ಬೋಳಾರ್ ಗುಡ್ಡೆ, ಪಟ್ಲ, ಕಟಪಾಡಿ, ಕೋಟೆ, ಮಟ್ಟು, ಪಡುಕರೆಯ ಎಲ್ಲಾ ಮೀನು ಕಟ್ಟಿಂಗ್ ಶೆಡ್ ನ 50 ಕ್ಕೂ ಅಧಿಕ ಮಹಿಳೆಯರು ಉದ್ಯಾವರ ಪಿತ್ರೋಡಿಯ ಎಂಕೆ ಬಾಲ್ ರಾಜ್ ರವರ ದಾಸ್ತಾನು ಗೋಡೌನಿನ ಪರವಾನಿಗೆ ರದ್ದು ಮಾಡಬಾರದಾಗಿ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್ ರಿಗೆ ಮನವಿ ನೀಡಿದರು.

ಮನವಿ ಸ್ವೀಕರಿಸಿದ ಬಳಿಕ ಮಹಿಳೆಯರಿಗೆ ಮತ್ತು ಕಟಿಂಗ್ ಶೆಡ್ ನಲ್ಲಿ ದುಡಿಯುವ ಸಿಬ್ಬಂದಿ ವರ್ಗದವರಿಗೆ ಭರವಸೆ ನೀಡಿದ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್ ಫಿಶ್ ಮಿಲ್ ಮತ್ತು ಫ್ರೀಝಿಂಗ್ ಪ್ಲಾಂಟ್ (ಮೀನಿನ ಶೀತಲೀಕರಣ) ಬಿಟ್ಟು ಯಾವುದೇ ಕಾನೂನು ರೀತಿಯ ಚಟುವಟಿಕೆಗಳಿಗೆ ನಮ್ಮ ವಿರೋಧವಿಲ್ಲ. ನಿಮ್ಮ ಕಟ್ಟಿಂಗ್ ಶೆಡ್ ಬಂದ್ ಆಗಲು ನಮ್ಮಿಂದ ಸಮಸ್ಯೆಯಾಗುವುದಿಲ್ಲ. ಕಾನೂನು ಬದ್ಧವಾಗಿದ್ದು ನಾವು ವಿರೋಧಿಸಿದರೆ ಕಾನೂನು ನಮ್ಮನ್ನು ಪ್ರಶ್ನಿಸುತ್ತದೆ. ಖಂಡಿತವಾಗಿ ಈ ಬಗ್ಗೆ ಪಂಚಾಯತ್ ಸಭೆಯಲ್ಲಿ ಚರ್ಚಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ವಿವಿಧ ಕಡೆಗಳಿಂದ ಆಗಮಿಸಿದ ಮಹಿಳೆಯರು ಮತ್ತು ಸಿಬ್ಬಂದಿ ವರ್ಗದವರು ಪ್ರಮುಖರಾದ ಪ್ರಕಾಶ್, ನವೀನ್ ಎಲೆಕ್ಟ್ರಿಷಿಯನ್, ಮಹೇಶ್ ಸುವರ್ಣ ಹಾಗೂ ಕಟ್ಟಿಂಗ್ ಶೆಡ್ಯೂಲ್ ನಡೆಸುತ್ತಿರುವ ಸಂತೋಷ್ ಕುಂದರ್ ಉದ್ಯಾವರ, ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಸಮಸ್ಯೆಯ ಬಗ್ಗೆ ವಿವರಿಸಿ ಮನವಿ ಮಾಡಿದರು.

ಮನವಿಯ ಸಂಪೂರ್ಣ ಸಾರಾಂಶ: ಉದ್ಯಾವರ ಪಿತ್ರೋಡಿಯ 3 ಮೀನು ಕಟ್ಟಿಂಗ್ ಶೆಡ್ ಗಳು ಪರಿಸರ ಇಲಾಖೆಯ ಆದೇಶದಂತೆ ಮುಚ್ಚಲಾಗಿದ್ದು, ಸುಮಾರು 2 ತಿಂಗಳಿನಿಂದ ಮೀನು ಕಟ್ಟಿಂಗ್ ಕೆಲಸವಿಲ್ಲದೆ ನಾವೆಲ್ಲರೂ ಕಂಗಾಲಾಗಿದ್ದೇವೆ. ಆ ಸಮಯದಲ್ಲಿ ಎಂ. ಕೆ. ಬಾಲ್ ರಾಜ್ ರವರ ಕಟ್ಟಡದಲ್ಲಿರುವ ಕಟ್ಟಿಂಗ್ ಶೆಡ್ ವ್ಯವಸ್ತಿತವಾಗಿರುವುದು ಎಂದು ತಿಳಿದುಕೊಂಡು, ಊರಿನ ಮತ್ತು ಆಸುಪಾಸಿನ ಎಲ್ಲಾ ಮೀನು ಕಟ್ಟಿಂಗ್ ಮಹಿಳೆಯರು ಸೇರಿ ನಮ್ಮ ಕಟ್ಟಿಂಗ್ ಶೆಡ್ ನ ಮಾಲಕರಾದ ಸಂತೋಷ್ ಕುಂದರ್ ಅವರ ಮುಂದಾಳತ್ವದಲ್ಲಿ, ಎಂಕೆ ಬಾಲ್ ರಾಜ್ ರವರನ್ನು ಭೇಟಿಯಾಗಿ ನಮಗೆ ನಿಮ್ಮ ಕಟ್ಟಡದಲ್ಲಿ ದುಡಿಯಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಾಗ, ಅವರ ಕಟ್ಟಡದಲ್ಲಿ ತುಂಬಿಟ್ಟಿದ್ದ ಅಷ್ಟೂ ದಾಸ್ತಾನು ಅಸಾಧ್ಯವಾದರೂ ಖಾಲಿ ಮಾಡಿ ಯಾವುದೇ ಫಲಾಪೇಕ್ಷೆ ಇಲ್ಲದೆ ಧರ್ಮಾರ್ಥವಾಗಿ ನಮಗೆ ದುಡಿಯಲು ಅವಕಾಶ ಮಾಡಿಕೊಟ್ಟಿರುತ್ತಾರೆ.

ಎಂ.ಕೆ ಬಾಲ್ ರಾಜ್ ರವರ ಕಟ್ಟಡದಲ್ಲಿ ಇರುವ ಮೀನು ಕಟ್ಟಿಂಗ್ ಶೆಡ್ ತಮ್ಮ ದಾಸ್ತಾನು ತುಂಬಿಡಲು ಗೋದಾಮಿನಂತೆ ಉಪಯೋಗಿಸುತ್ತಿದ್ದು, ಸಂಪಿಗೆ ನಗರದಲ್ಲಿರುವ ಅವರ ಖಾಸಗಿ ಸ್ಥಳದಲ್ಲಿ ಈ ಎಲ್ಲ ದಾಸ್ತಾನುಗಳನ್ನು ಸ್ಥಳಾಂತರಿಸುವ ಸಲುವಾಗಿ ಕಾನೂನಿನ ಪ್ರಕಾರವೇ ಎಲ್ಲ ದಾಖಲೆ ಪತ್ರಗಳನ್ನು ಗೋದಾಮನ್ನು ಮಾಡಲು ಪರವಾನಗಿ ಪಡೆದಿರುತ್ತಾರೆ. ಇದರಲ್ಲಿ ಯಾವುದೇ ಕಂಪೆನಿ, ಫಿಶ್ ಮೀಲ್ ಅಥವಾ ಕಾನೂನಿಗೆ ವಿರುದ್ಧವಾದ ಯಾವುದೇ ಚಟುವಟಿಕೆ ಮಾಡುವುದಿಲ್ಲ. ಕೈಗಾರಿಕೋದ್ಯಮ ಮಾಡಲು ಕೈಗಾರಿಕಾ ಭೂ ಪರಿವರ್ತನೆಯೂ ಕೂಡ ಮಾಡಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಗೋದಾಮಿನ ಪರವಾನಗಿ ರದ್ದಾದರೆ ಅವರ ದಾಸ್ತಾನುಗಳನ್ನು ತುಂಬಿಡಲು ಅನಾನುಕೂಲವಾದ ಸಂದರ್ಭದಲ್ಲಿ ಯಥಾಸ್ಥಿತಿಯಂತೆ ಮೀನು ಕಟ್ಟಿಂಗ್ ಮಾಡಲು ಕೊಟ್ಟಿರುವ ಸ್ಥಳವು ಬಿಟ್ಟುಕೊಡುವ ಪರಿಸ್ಥಿತಿ ಉದ್ಭವವಾದರೆ ನಮ್ಮೆಲ್ಲರ ಜೀವನೋಪಾಯವೂ ತುಂಬಾ ಚಿಂತಾಜನಕವಾಗುತ್ತದೆ.
ಆದ ಕಾರಣ ತಾವುಗಳು ಎಂಕೆ ಬಾಲ್ ರಾಜ್ ರವರ ಸಂಪಿಗೆನಗರದಲ್ಲಿರುವ ಖಾಸಗಿ ಸ್ಥಳದಲ್ಲಿ ಗೋಡಾನ್ ಕಟ್ಟಡ ಕಟ್ಟಲು ನೀಡಿರುವ ಪರವಾನಿಗೆಯನ್ನು ರದ್ದು ಪಡಿಸಬಾರದು ಎಂದು ತಮ್ಮಲ್ಲಿ ವಿನಂತಿಸಿ ಕೊಳ್ಳುತ್ತಿದ್ದೇವೆ.

Leave a Reply

Your email address will not be published. Required fields are marked *

error: Content is protected !!