ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ ಇದ್ದರೂ ಪಕ್ಷ ನನ್ನನ್ನು ಗುರುತಿಸಿದೆ: ರಘುಪತಿ ಭಟ್
ಉಡುಪಿ: ಶಾಸಕ ಕೆ. ರಘುಪತಿ ಭಟ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಉಡುಪಿ ನಗರ ಇದರ ಆಶ್ರಯದಲ್ಲಿ ನಗರ ಬಿಜೆಪಿ ಎಲ್ಲಾ ಮೋರ್ಚಾಗಳ ಸಹಭಾಗಿತ್ವದಲ್ಲಿ ಆಯೋಜಿಸಿದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಕೆಎಂಸಿ ಮಣಿಪಾಲ ರಕ್ತ ನಿಧಿ ವಿಭಾಗದಲ್ಲಿ ನಡೆಯಿತು.
ರಕ್ತದಾನ ಶಿಬಿರವನ್ನು ಶಾಸಕ ಕೆ. ರಘುಪತಿ ಭಟ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನನ್ನ ಹುಟ್ಟುಹಬ್ಬದ ದಿನದಂದು ರಕ್ತದಾನ ಮಾಡಿದವರು ನನಗೆ ನೀಡಿದ ದೊಡ್ಡ ಗೌರವ ಎಂದು ಭಾವಿಸುತ್ತೇನೆ. ನನಗೆ ಇದಕ್ಕಿಂತ ದೊಡ್ಡ ಗೌರವ ಬೇರೊಂದು ಇರಲಿಕ್ಕೆ ಸಾಧ್ಯವಿಲ್ಲ. ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ ಇದ್ದರೂ ಪಕ್ಷ ಮತ್ತು ಪಕ್ಷದ ಹಿರಿಯರು ನನ್ನನ್ನು ಗುರುತಿಸಿದ್ದರಿಂದ ನಾನು ಇಂದು ಸಮಾಜದಲ್ಲಿ ವ್ಯಕ್ತಿಯಾಗಿ ಬೆಳೆಯುವಂತಾಗಿದೆ ಎಂದರು. ಇದೇ ವೇಳೆ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಈ ರಕ್ತದಾನ ಶಿಬಿರದಲ್ಲಿ ರಿಕ್ಷಾ ಚಾಲಕರು, ಕಾರ್ಯಕರ್ತರು, ಶಾಸಕರ ಅಭಿಮಾನಿಗಳು ಸೇರಿ ಅಪಾರ ಸಂಖ್ಯೆಯಲ್ಲಿ ರಕ್ತದನ ಮಾಡಿದ್ದು ಒಟ್ಟು 135 ಯುನಿಟ್ ರಕ್ತ ಸಂಗ್ರಹಿಸಲಾಯಿತು.
ಈ ಸಂದರ್ಭ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ನಗರ ಸಭಾ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ಮಂಜುನಾಥ್ ಮಣಿಪಾಲ್, ರಕ್ತ ನಿಧಿ ಮುಖ್ಯಸ್ಥೆ ಶಮ್ಮಿ ಶಾಸ್ತ್ರಿ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಮೋಹನ್ ಶೆಟ್ಟಿ, ಜಿಲ್ಲಾ ಬಿಜೆಪಿ ಕೋಶಾಧಿಕಾರಿ ಪ್ರವೀಣ್ ಶೆಟ್ಟಿ, ಶ್ರೀಶಾ ನಾಯಕ್, ಸುವರ್ಧನ್ ನಾಯಕ್, ಅಂಡಾರು ದೇವಿಪ್ರಸಾದ್ ಶೆಟ್ಟಿ ಸತೀಶ್ ಸಾಲಿಯಾನ್, ಗಿರೀಶ್ ಅಂಚನ್ ಮೊದಲಾದವರು ಉಪಸ್ಥಿತರಿದ್ದರು.