ಪಾರ್ಕಿಂಗ್ಗೆ ಮೀಸಲಿರಿಸಿದ ಸ್ಥಳದಲ್ಲಿ ವಾಣಿಜ್ಯ ಅಂಗಡಿ: ತೆರವುಗೊಳಿಸುವಂತೆ ನಗರಸಭೆ ಎಚ್ಚರಿಕೆ
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿರುವ ಬಹು ಮಹಡಿ ಕಟ್ಟಡ ಮತ್ತು
ವಾಣಿಜ್ಯ ಸಂಕೀರ್ಣಗಳಲ್ಲಿ ಅನುಮೋದಿತ ನಕ್ಷೆಯಲ್ಲಿರುವಂತೆ ವಾಹನ ಪಾರ್ಕಿಂಗ್ಗೆ ಸ್ಥಳಾವಕಾಶ ಕಲ್ಪಿಸಬೇಕಾಗಿರುತ್ತದೆ. ಆದರೆ ಕೆಲವು ವಾಣಿಜ್ಯ ಸಂಕೀರ್ಣ ಮತ್ತು ವಸತಿ ಸಮುಚ್ಛಯದವರು ಅನುಮೋದಿತ ನಕ್ಷೆಯಂತೆ ಪಾರ್ಕಿಂಗ್ ಜಾಗವನ್ನು ಅತಿಕ್ರಮಿಸಿ ವಾಣಿಜ್ಯ ಹಾಗೂ ಇತರೇ ಚಟುವಟಿಕೆಗಳಿಗೆ ಬಳಸುತ್ತಿರುವುದು ಕಾನೂನುಬಾಹಿರವಾಗಿದ್ದು, ಇದರಿಂದ ಸಾರ್ವಜನಿಕರು / ಗ್ರಾಹಕರು ತಮ್ಮ ವಾಹನಗಳನ್ನು ರಸ್ತೆ ಬದಿಯ ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡುತ್ತಿರುವುದರಿಂದ ಸುಗಮ ಜನಸಂಚಾರ ಮತ್ತು ವಾಹನ ಸಂಚಾರಕ್ಕೆ ತೀವ್ರ ತೊಂದರೆಯುoಟಾಗಿರುವುದು
ಜಿಲ್ಲಾಡಳಿತ ಹಾಗೂ ನಗರಸಭೆಯ ಗಮನಕ್ಕೆ ಬಂದಿರುತ್ತದೆ.
ಆದುದರಿಂದ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿರುವ ಬಹುಮಹಡಿ ಕಟ್ಟಡ ಮತ್ತು ವಾಣಿಜ್ಯ ಸಂಕೀರ್ಣಗಳಲ್ಲಿ ವಾಹನ ಪಾರ್ಕಿಂಗ್ಗಾಗಿ ಮೀಸಲಿರಿಸಿದ ಸ್ಥಳಗಳಲ್ಲಿರುವ ವಾಣಿಜ್ಯ ಅಂಗಡಿಗಳನ್ನು ತೆರವುಗೊಳಿಸಿ, ಮಂಜೂರಾದ ಅನುಮೋದಿತ ನಕ್ಷೆಯಂತೆ ವಾಹನ ನಿಲುಗಡೆಗೆ 15 ದಿನಗಳಲ್ಲಿ ಸ್ಥಳಾವಕಾಶವನ್ನು ಕಲ್ಪಿಸಿಕೊಡಬೇಕು. ತಪ್ಪಿದ್ದಲ್ಲಿ
ಸದರಿ ಸಮುಚ್ಛಯಗಳಿಗೆ ನೀಡಲಾದ ಮೂಲಭೂತ ಸೌಕರ್ಯಗಳನ್ನು ಸ್ಥಗಿತಗೊಳಿಸಲಾಗುವುದು. ಹಾಗೂ ತಪ್ಪು ಮಾಹಿತಿ ನೀಡಿ ಪಡೆಯಲಾದ ಉದ್ದಿಮೆ ಪರವಾನಿಗೆಯನ್ನು ರದ್ದುಪಡಿಸಿ, ಅಕ್ರಮವಾಗಿ ಪಾರ್ಕಿಂಗ್ ಜಾಗದಲ್ಲಿ ನಿರ್ಮಿಸಿರುವ ನಿರ್ಮಾಣವನ್ನು ನಗರಸಭೆಯಿಂದ ಪರಿಶೀಲಿಸಿ, ತೆರವುಗೊಳಿಸಿ, ಭಾರಿ ದಂಡದೊoದಿಗೆ ಕ್ರಮ ವಹಿಸಲಾಗುವುದು. ಈ ಪ್ರಕ್ರಿಯೆಗಳಿಂದ ಉಂಟಾಗುವ ಯಾವುದೇ ಹಾನಿಗೆ ನಗರಸಭೆ ಜವಾಬ್ದಾರಿಯಾಗುವುದಿಲ್ಲ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.