ಬೆಳಪು: ಶೈಕ್ಷಣಿಕ-ಕೈಗಾರಿಕೆ ಅಭಿವೃದ್ಧಿಗೆ ₹480 ಕೋಟಿ ಯೋಜನೆ
ಪಡುಬಿದ್ರಿ: ಬೆಳಪು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಐದು ವರ್ಷಗಳಲ್ಲಿ ಗ್ರಾಮದ ಅಭಿವೃದ್ಧಿಗೆ ₹ 480 ಕೋಟಿಗೂ ಹೆಚ್ಚು ಅನುದಾನ ತರಲಾಗಿದೆ ಎಂದು ಬೆಳಪು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಗುರುವಾರ ಬೆಳಪು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಒಂದೇ ಗ್ರಾಮದಲ್ಲಿ ಶೈಕ್ಷಣಿಕ- ಕೈಗಾರಿಕೆ ಮತ್ತು ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಬೃಹತ್ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಗ್ರಾಮಸ್ಥರಿಗೆ ಮನೆಗೊಂದು ಉದ್ಯೋಗ ಒದಗಿಸುವ ಯೋಜನೆ ನಮ್ಮದಾಗಿದೆ ಎಂದು ಅವರು ಹೇಳಿದರು.
ಕೆ.ಜಿ ಯಿಂದ ಪಿ.ಜಿ ವರೆಗಿನ ಶೈಕ್ಷಣಿಕ ವ್ಯವಸ್ಥೆಯೊಂದಿಗೆ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ ಸ್ಥಾಪನೆ, ಸರ್ಕಾರಿ ತಾಂತ್ರಿಕ ಪಾಲಿಟೆಕ್ನಿಕ್ ಕಾಲೇಜು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕಾರ್ಯಾರಂಭಗೊಳ್ಳಲಿದೆ ಎಂದು ಅವರು ತಿಳಿಸಿದರು.
‘ಮನೆಗೊಂದು ಮಗು- ಮಗುವಿಗೊಂದು ಗಿಡ’ ಯೋಜನೆ ರೂಪಿಸಿದ್ದೇವೆ. ಮನೆ ಮನೆಗೆ ಕುಡಿವ ನೀರಿನ ಯೋಜನೆ, ಹೆಚ್ಚಿನ ರಸ್ತೆಗಳಿಗೆ ಕಾಂಕ್ರಿಟೀಕರಣ, ಸಂಪರ್ಕ ರಸ್ತೆಗಳ ನಿರ್ಮಾಣ, ಕ್ರೀಡಾಂಗಣ ನಿರ್ಮಾಣ, ಗ್ರಾಮಸೌಧ ನಿರ್ಮಾಣ, ವಾಣಿಜ್ಯ ಕಟ್ಟಡಗಳ ನಿರ್ಮಾಣ, ಸಂತೆ ಮಾರುಕಟ್ಟೆ ನಿರ್ಮಾಣ, ರಿಕ್ಷಾ ತಂಗುದಾಣಗಳ ನಿರ್ಮಾಣ, ಅಂಬೇಡ್ಕರ್ ಭವನ ನಿರ್ಮಾಣ, ಕಿಂಡಿ ಅಣೆಕಟ್ಟುಗಳ ನಿರ್ಮಾಣ ಇಂತಹ ಅನೇಕ ಪ್ರಮುಖ ಯೋಜನೆಗಳ ಅನುಷ್ಟಾನಕ್ಕಾಗಿ ದುಡಿದ್ದಿದ್ದು, ನುಡಿದಂತೆ ನಡೆದಿದ್ದೇನೆ’ ಎಂದು ಅವರು ತಿಳಿಸಿದರು.
ಉಪಾಧ್ಯಕ್ಷೆ ಶೋಭಾ ಭಟ್, ಪಿಡಿಒ ಎಚ್.ಆರ್. ರಮೇಶ್, ಸದಸ್ಯರಾದ ದಿನೇಶ್ ಪೂಜಾರಿ, ಕರುಣಾಕರ ಶೆಟ್ಟಿ, ಶರತ್ ಕುಮಾರ್, ಸುರೇಶ್ ದೇವಾಡಿಗ, ನೂರ್ ಜಹಾನ್, ವಿಜಯಲಕ್ಷ್ಮೀ, ಪೈಗಂ ಬಾನು, ಉಷಾ ವಾಸು ಹಾಗೂ ಅನಿತಾ ಆನಂದ್ ಇದ್ದರು.