ಭಟ್ಕಳ ವ್ಯಕ್ತಿ ಕೊರೋನಾ ಸೋಂಕಿನಿಂದ ಮೃತ್ಯು: ಸುಳ್ಳು ವದಂತಿ ಆರೋಗ್ಯ ಇಲಾಖೆ
ಮಲ್ಪೆ: ಮೀನುಗಾರಿಕೆಗೆ ಹೊರಟಿದ್ದ ಬೋಟ್‌ನಲ್ಲಿದ್ದ ಮೀನುಗಾರನೊಬ್ಬ ಜ್ವರದಿಂದ ಸಾವನ್ನಪ್ಪಿದ್ದು, ಆತನ ಜೊತೆಗಿದ್ದವರಿಗೂ ಜ್ವರ, ಕೆಮ್ಮಿನಂತಹ ಲಕ್ಷಣಗಳು ಕಂಡು ಬಂದಿದೆ. ಇದು ಕೋವಿಡ್-೧೯ ಸೋಂಕು ಇರಬಹುದು, ಆತನ ದೇಹದೊಂದಿಗೆ ಬೋಟ್ ಬಂದರಿಗೆ ಮರಳುತ್ತಿದೆ ಎಂಬ ಸುದ್ದಿಯೊಂದು ಉಡುಪಿ, ಮಲ್ಪೆಯಲ್ಲಿ ಹರಿದಾಡುತ್ತಿದ್ದು, ಇದೊಂದು ಸುಳ್ಳು ಸುದ್ದಿಯಾಗಿದ್ದು ಈ ಬಗ್ಗೆ ಆರೋಗ್ಯ ಇಲಾಖೆಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಕೋವಿಡ್-19 ಜಿಲ್ಲಾ ನೋಡಲ್ ಅಧಿಕಾರಿ ಡಾ. ಪ್ರಶಾಂತ್ ಭಟ್ “ಉಡುಪಿ ಟೈಮ್ಸ್” ಗೆ ತಿಳಿಸಿದ್ದಾರೆ.
ಆರೋಗ್ಯ ಇಲಾಖೆ ಈ ಬಗ್ಗೆ ಮಲ್ಪೆಯ ಕೋಸ್ಟಲ್ ಪೊಲೀಸ್, ಮಲ್ಪೆ ಪೊಲೀಸ್, ಮೀನುಗಾರಿಕ ಸಹಾಯಕ ನಿರ್ದೇಶಕರಲ್ಲೂ ಮಾಹಿತಿ ಕೇಳಿದ್ದು, ಅವರೂ ಕೂಡ ಇಂತಹ ಯಾವುದೇ ಪ್ರಕರಣ ನಡೆದಿಲ್ಲ ಎಂದಿದ್ದಾರೆಂದು ಎಂದು ಡಾ. ಪ್ರಶಾಂತ್ ಸ್ಪಷ್ಟಪಡಿಸಿದ್ದಾರೆ.
ಇದು ಸುಳ್ಳು ಸುದ್ದಿ. ಯಾರಿಗೂ ಕೋವಿಡ್-19 ಸೋಂಕು ಬಂದಿಲ್ಲ. ಯಾರೂ ಇಲ್ಲಿ ಮೃತಪಟ್ಟಿಲ್ಲ ಎಂದು ಮಲ್ಪೆ ಮೀನುಗಾರಿಕಾ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ ಅವರು ಕೂಡ ಸ್ಪಷ್ಟಪಡಿಸಿದ್ದಾರೆ.
ಕೆಲ ದಿನಗಳ ಹಿಂದೆ ಮೀನುಗಾರಿಕೆಗೆ ಹೋದ ಒಬ್ಬರಿಗೆ ಕೈಗೆ ಗಾಯವಾಗಿತ್ತು. ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಅದರ ನೋವಿಗೆ ಅವರಿಗೆ ಜ್ವರ ಕಾಣಿಸಿಕೊಂಡಿತ್ತು ಅಷ್ಟೇ. ಆದರೆ ಯಾವುದೇ ಕೋವಿಡ್-೧೯ ಸೋಂಕಿನ ಲಕ್ಷಣ ಕಂಡು ಬಂದಿಲ್ಲ ಎಂದರು.
ಕೆಲವು ಕಿಡಿಗೇಡಿಗಳು ಮತ್ಸೋದ್ಯಮಕ್ಕೆ, ಮೀನುಗಾರರ ಜೀವನಕ್ಕೆ ಹಾನಿ ಮಾಡುವ ಉದ್ದೇಶದಿಂದ ಇಂತಹ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಯ ಬಿಡುತ್ತಿದ್ದಾರೆ. ಇದರಿಂದ ಒಂದು ಸಮಾಜವೇ ನಲುಗುತ್ತಿದೆ ಎಂದು ಕೃಷ್ಣ ಸುವರ್ಣ ಆತಂಕ ವ್ಯಕ್ತಪಡಿಸಿದ್ದಾರೆ.
ಇಂತಹ ಸುಳ್ಳು ಸುದ್ದಿಗಳನ್ನು ಹರಿಯ ಬಿಡುತ್ತಿರುವವರ ಈ ಹಿಂದೆ ಒಮ್ಮೆ ಸೈಬರ್ ಅಪರಾಧ ದಳಕ್ಕೆ ದೂರು ನೀಡಿದ್ದೆವು. ನಂತರ ಸ್ವಲ್ಪ ಸಮಯ ತಣ್ಣಗಾಗಿತ್ತು. ಈಗ ಮತ್ತೆ ಅಪಾಯಕಾರಿಯಾಗಿದೆ. ಇದರ ಬಗ್ಗೆ ನಾವು ಸಮಿತಿಯಲ್ಲಿ ಚರ್ಚೆ ನಡೆಸಿ ಸಂಬಂಧಪಟ್ಟವರಿಗೆ ದೂರು ನೀಡುತ್ತೇವೆ ಎಂದು ಕೃಷ್ಣ ಸುವರ್ಣ ಅವರು “ಉಡುಪಿ ಟೈಮ್ಸ್” ಗೆ ತಿಳಿಸಿದ್ದಾರೆ.