ಇದೇ ಮೊದಲ ಬಾರಿಗೆ ಗುತ್ತಿಗೆದಾರರ ಪ್ರತಿಭಟನೆ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಗುತ್ತಿಗೆದಾರರು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದಾರೆ. ಪ್ರತಿ ಕಾಮಗಾರಿಗೆ ಬಿಲ್ ಮಾಡಿಸಿಕೊಳ್ಳಲು ಕಮಿಷನ್ ಕೊಡಲು ಸಾಧ್ಯವಾಗುತ್ತಿಲ್ಲ. ತಮ್ಮ ಸಮಸ್ಯೆ ಬಗೆಹರಿಸಿ ಎಂದು ಮಂಗಳವಾರ ಕಾರವಾರ ನಗರದ ರವೀಂದ್ರನಾಥ್ ಠಾಗೋರ್ ಕಡಲ ತೀರದಲ್ಲಿ ಅರೆಬೆತ್ತಲಾಗಿ ಪ್ರತಿಭಟನೆ ನಡೆಸಿದರು.
ಕಾರವಾರ ತಾಲೂಕು ನೋಂದಾಯಿತ ಗುತ್ತಿಗೆದಾರರ ಸಂಘದ ವತಿಯಿಂದ ಗುತ್ತಿಗೆದಾರರಿಗೆ ಆಗುತ್ತಿರುವ ಸಮಸ್ಯೆ ಹಾಗೂ ಮಿತಿಮೀರಿದ ಭ್ರಷ್ಟಾಚಾರ ತಡೆಗಟ್ಟುವ ಕುರಿತು ಪ್ರತಿಭಟನೆ ನಡೆಸಿದ್ದಾರೆ. ನಗರದ ಠಾಗೋರ್ ಕಡಲ ತೀರದಲ್ಲಿ ಅರೆಬೆತ್ತಲಾಗಿ ಸಮುದ್ರದಲ್ಲಿ ಅರ್ಧ ಮುಳುಗಿ ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಧಿಕಾರಿ ಕಚೇರಿಯ ಬಳಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ತೈಲ ಬೆಲೆ ಏರಿಕೆ: ಕರಾವಳಿಯಲ್ಲಿ ಮೀನುಗಾರಿಕೆ ಅಘೋಷಿತ ಬಂದ್ ಕಳೆದ ಕೆಲ ವರ್ಷಗಳಿಂದ ಭ್ರಷ್ಟಾಚಾರ ಹೆಚ್ಚಾಗಿದ್ದು, ಪ್ರತಿ ಕಾಮಗಾರಿಯ ಬಿಲ್ ಮಾಡಿಸಿಕೊಳ್ಳಲು ಲಂಚ ಕೊಡುವ ಅಗತ್ಯವಿದೆ. ಕೆಲವೆಡೆ ಕಾಮಗಾರಿಯನ್ನು ಹಾಕಿಸಿಕೊಂಡು ಬಂದು, ನಂತರ ಮುಗಿಸಿದ ನಂತರವೂ ಬಿಲ್ ಮಾಡಿಸಿಕೊಳ್ಳುವ ವರೆಗೂ ಹಣವನ್ನು ಕೊಟ್ಟು ಕೆಲಸ ಮಾಡಿಸಿಕೊಳ್ಳುವ ಪರಿಸ್ಥಿತಿ ಇದೆ.
ಸಾಲ ಮಾಡಿ ಬ್ಯಾಂಕ್ ಗಳಿಗೆ ಬಡ್ಡಿ ಕಟ್ಟಲಾಗದೇ ಕಷ್ಟ
ಅಧಿಕ ರಾಜಧನ, ಜಿಎಸ್’ಟಿ, ಆದಾಯ ತೆರಿಗೆ ಹೀಗೆ ಒಂದು ಕಾಮಗಾರಿಯ ಮೇಲೆ ಎಲ್ಲಾ ತೆರಿಗೆ ತೆಗೆದರೆ ಗುತ್ತಿಗೆದಾರನಿಗೆ ಉಳಿಯುವ ಹಣವೇ ಕಡಿಮೆ. ಹೀಗಿದ್ದಾಗ ಗುಣಮಟ್ಟದ ಕಾಮಗಾರಿ ಮಾಡಲು ಹೇಗೆ ಸಾಧ್ಯ ಎಂದು ಪ್ರತಿಭಟನಾ ಗುತ್ತಿಗೆದಾರರು ಅಸಮಾಧಾನ ವ್ಯಕ್ತಪಡಿಸಿದರು. ಇದರ ನಡುವೆ ಕಮಿಷನ್ ಕೊಟ್ಟು ಬಿಲ್ ಮಾಡಿಸಿಕೊಳ್ಳಬೇಕಾಗಿದ್ದು, ಗುತ್ತಿಗೆದಾರರು ಕೆಲಸ ಮಾಡುವುದೇ ಕಷ್ಟವಾಗಿದೆ. ಇನ್ನು ಕೆಲ ಕಡೆ ಮಾಡಿದ ಕಾಮಗಾರಿಗೆ ಬಿಲ್ ಗಳನ್ನು ಸಹ ಮಾಡುತ್ತಿಲ್ಲ. ಹಲವು ದಿನಗಳಿಂದ ಕಾಮಗಾರಿ ಮುಗಿಸಿದ್ದರೂ, ಬಿಲ್ ಆಗದೇ ಗುತ್ತಿಗೆದಾರರು ಸಾಲ ಮಾಡಿ ಬ್ಯಾಂಕ್ ಗಳಿಗೆ ಬಡ್ಡಿ ಕಟ್ಟಲಾಗದೇ ಕಷ್ಟ ಪಡುವಂತಾಗಿದೆ.
ಉತ್ತರ ಕನ್ನಡ ಜಿಲ್ಲೆಗೆ ಪ್ರತ್ಯೇಕ ದರಪಟ್ಟಿ
ರಾಜಕಾರಣಿಗಳ ಹೆಸರಿನಲ್ಲಿಯೇ ಕೆಲ ಅಧಿಕಾರಿಗಳು ಹಣವನ್ನು ಕೇಳುತ್ತಾರೆ. ಅವರಿಗೆ ಖುಷಿಯಾಗುವಷ್ಟು ಕಮಿಷನ್ ಕೊಡದೇ ಇದ್ದರೆ ಬಿಲ್ ಮಾಡುವುದಿಲ್ಲ. ಅದರಲ್ಲೂ ನೆರೆ ಹಾವಳಿ ಸಂಬಂಧ ಬಂದ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಹೇಳತೀರದಂತಾಗಿದೆ ಎಂದು ಕಿಡಿಕಾರಿದರು. ಇದಲ್ಲದೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಹೆಚ್ಚು ಬರುವುದರಿಂದ ಗುತ್ತಿಗೆದಾರರಿಗೆ ಕಾಮಗಾರಿ ಅವಧಿಯಲ್ಲಿ ಮಳೆಗಾಲ ಹೊರತುಪಡಿಸಿ ಕಾಲಾವಧಿ ನೀಡಬೇಕು. ವಿವಿಧ ಇಲಾಖೆಯಲ್ಲಿ ಗುತ್ತಿಗೆದಾರರಿಗೆ ಪಾವತಿ ಆಗದೇ ಉಳಿದಿರುವ ಬಿಲ್ ಗಳನ್ನು ಪಾವತಿಸಬೇಕು. ದರವಾರು ಪಟ್ಟಿ ಮಾಡುವಾಗ ಕರಾವಳಿ ಪ್ರದೇಶ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಪ್ರತ್ಯೇಕ ದರಪಟ್ಟಿ ನಮೂದಿಸಬೇಕು ಎಂದರು.
ಸಣ್ಣಪುಟ್ಟ ಕಾಮಗಾರಿಗೂ ಕಾರ್ಯಕ್ರಮ
ಪ್ಯಾಕೇಜ್ ಟೆಂಡರ್ ಕರೆಯುವುದನ್ನು, ಎಲ್ಒಸಿ ಪಡೆಯಲು ರಾಜ್ಯ ಮಟ್ಟದಲ್ಲಿ ಲಂಚ ಕೇಳುವುದನ್ನು ನಿಲ್ಲಿಸಬೇಕು. ಹಾಗೆಯೇ ಕಾಮಗಾರಿಗೆ ಅತೀ ಕಡಿಮೆ ದರ ನಮೂದಿಸಿದಲ್ಲಿ ವ್ಯತ್ಯಾಸದ ಮೊತ್ತ ತುಂಬುವ ಕ್ರಮ ಕೈಬಿಡಬೇಕು ಎಂದು ಪ್ರತಿಭಟನಾಕಾರರು ಮನವಿಯಲ್ಲಿ ಆಗ್ರಹಿಸಿದ್ದಾರೆ. ಸಣ್ಣ ಸಣ್ಣ ಕಾಮಗಾರಿಗಳಿಗೂ ಗುದ್ದಲಿ ಪೂಜೆ, ಶಂಕುಸ್ಥಾಪನೆ ಎಂದು ಕಾರ್ಯಕ್ರಮ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಸಂಘದ ಅಧ್ಯಕ್ಷ ಮಾಧವ ನಾಯಕ ಹೇಳಿದ್ದಾರೆ. ಇತ್ತಿಚ್ಚಿಗೆ ಸಣ್ಣಪುಟ್ಟ ಕಾಮಗಾರಿಗೂ ಕಾರ್ಯಕ್ರಮ ಮಾಡಿ ಚಾಲನೆ ನೀಡುವಂತೆ ಅಧಿಕಾರಿಗಳು ಒತ್ತಡ ಹಾಕುತ್ತಾರೆ.
ಕಾಮಗಾರಿಯನ್ನು ಪ್ರಾರಂಭಿಸಲು ಬಿಡುವುದಿಲ್ಲ
ಕಾರ್ಯಕ್ರಮಕ್ಕೆ ಬೇಕಾದ ಪೆಂಡಾಲ್ ಸೇರಿದಂತೆ ಎಲ್ಲಾ ಖರ್ಚುಗಳನ್ನು ಗುತ್ತಿಗೆದಾರನೇ ಮಾಡಬೇಕು. ಈ ಖರ್ಚು ಕಾಮಗಾರಿಯ ಬಿಲ್ ನಲ್ಲಿ ಹಾಕಲು ಸಾಧ್ಯವಿಲ್ಲ. ಮೊದಲೇ ಮಾಡಿದ ಕೆಲಸಗಳಿಗೆ ಬಿಲ್ ಗಳು ಆಗದೇ ಕಷ್ಟ ಪಡುವಂತಾಗಿದ್ದು, ಇದರಲ್ಲಿ ಕಾರ್ಯಕ್ರಮಗಳನ್ನು ಮಾಡಿ ಮತ್ತೆ ಹೆಚ್ಚಿನ ಖರ್ಚು ಮಾಡುವಂತಾಗಿದ್ದು, ದೊಡ್ಡ ಕಾಮಗಾರಿ ಹೊರತು ಪಡಿಸಿ ಸಣ್ಣಪುಟ್ಟ ಅನುದಾನ ಕಾಮಗಾರಿಗಳಿಗೆ ಕಾರ್ಯಕ್ರಮ ಮಾಡುವ ಕ್ರಮವನ್ನು ನಿಲ್ಲಿಸಬೇಕು ಎಂದರು. ಇದಲ್ಲದೇ ಹಲವು ಕಾಮಗಾರಿಗಳ ಟೆಂಡರ್ ಪಡೆದ ಮೇಲೂ ಗುದ್ದಲಿ ಪೂಜೆ ಮಾಡಿಲ್ಲ ಎಂದು ಕಾಮಗಾರಿಯನ್ನು ಪ್ರಾರಂಭಿಸಲು ಬಿಡುವುದಿಲ್ಲ. ಇದರಿಂದ ಗುತ್ತಿಗೆ ಪಡೆದವರಿಗೆ ಕಾಮಗಾರಿ ತಡವಾಗಿ, ಆರ್ಥಿಕವಾಗಿ ಸಹ ಹೊಡೆತ ಬೀಳಲಿದೆ. ಇಷ್ಟು ದಿನ ಈ ಬಗ್ಗೆ ಯಾರೂ ಧ್ವನಿ ಎತ್ತುತ್ತಿರಲಿಲ್ಲ. ಆದರೆ ಈಗ ನಮ್ಮ ಉಳಿವಿಗೆ ಧ್ವನಿ ಎತ್ತುವುದು ಅನಿವಾರ್ಯ ಎಂದು ಸಂಘದ ಅಧ್ಯಕ್ಷ ಮಾಧವ ನಾಯಕ ಆಗ್ರಹಿಸಿದ್ದಾರೆ.