ಬಾಂಬರ್ ಆದಿತ್ಯ ರಾವ್ ವಿರುದ್ಧ 700 ಪುಟಗಳ ಚಾರ್ಜ್‌ಶೀಟ್
ಮಂಗಳೂರು: ಜನವರಿ 20 ರಂದು ನಡೆದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಾಂಬ್ ಸ್ಫೋಟ ಯತ್ನದ ಪ್ರಕರಣ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸರು ನಗರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಗುರುವಾರ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಗೃಹ ಇಲಾಖೆಯ ಕಾರ್ಯದರ್ಶಿಯಿಂದ ಅಗತ್ಯ ಅನುಮತಿ ಪಡೆದ ನಂತರ 700 ಪುಟಗಳ ಚಾರ್ಜ್‌ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಚಾರ್ಜ್‌ಶೀಟ್‌ನ ಪ್ರಕಾರ, ಎಸಿಪಿ ಬೆಳ್ಳಿಯಪ್ಪ ನೇತೃತ್ವದ ಪೊಲೀಸ್ ತನಿಖಾ ತಂಡವು ಜನರು ಮತ್ತು ಅಧಿಕಾರಿಗಳಲ್ಲಿ ಭಯ ಹುಟ್ಟಿಸುವ ಸಲುವಾಗಿ ಆರೋಪಿ ಆದಿತ್ಯ ರಾವ್ ವಿಮಾನ ನಿಲ್ದಾಣದಲ್ಲಿ ಸ್ಫೋಟಕವನ್ನು ಅಳವಡಿಸಿರುವುದು ಪತ್ತೆಯಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್ ಪ್ರವೇಶದ್ವಾರದಲ್ಲಿ ಅಳವಡಿಸಲಾಗಿದ್ದ ಬಾಂಬ್ ಶೀಘ್ರದಲ್ಲೇ ಪತ್ತೆಯಾಗಿದ್ದು ವಿಮಾನ ನಿಲ್ದಾಣದಿಂದ ಕೆಲವು ಕಿಲೋಮೀಟರ್ ದೂರದಲ್ಲಿ ಅದನ್ನು ನಾಶಪಡಿಸಲಾಗಿದೆ.
ಆರೋಪಿ ಪ್ರಸ್ತುತ ಜೈಲಿನಲ್ಲಿದ್ದು, ಸಾಂಕ್ರಾಮಿಕ ರೋಗ ಕೊರೋನಾ ಕಾರಣದಿಂದಾಗಿ ಆತನ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ಬಾಕಿ ಇದೆ. ಘಟನೆ ನಡೆದ ಎರಡು ದಿನಗಳ ನಂತರ ರಾವ್ ಬೆಂಗಳೂರಿನ ಐಜಿಪಿ ಕಚೇರಿಯಲ್ಲಿ ಪೊಲೀಸರಿಗೆ ಶರಣಾಗಿದ್ದ. ಘಟನೆಯ ವಿಚಾರಣೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡವು ವಿವಿಧ ಸ್ಥಳಗಳಿಗೆ ಭೇಟಿ ನೀಡಿ, ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡುವಾಗ ಬಾಂಬ್ ಸಿದ್ದಪಡಿಸಿದ್ದ ಎಂದು ತನಿಖೆ ವೇಳೆ ಪತ್ತೆ ಹಚ್ಚಿದ್ದಾರೆ.