| ಮುಂಬೈ: ಮಾರಕ ಕೊರೋನಾ ಸೋಂಕು ಸಾಂಕ್ರಾಮಿಕದಿಂದಾಗಿ ಕಂಡು ಕೇಳರಿಯದ ರೀತಿಯಲ್ಲಿ ಲಾಕ್ ಡೌನ್ ಗೆ ತುತ್ತಾಗಿ ಹೈರಾಣಿಗಿದ್ದ ಭಾರತದಲ್ಲಿ ಇದೀಗ ಲಾಕ್ ಡೌನ್ ಜಾರಿಯಾಗುವ ಭೀತಿ ಎದುರಾಗಿದ್ದು, ಈಗಾಗಲೇ ಅಮರಾವತಿಯಲ್ಲಿ ಒಂದು ಸಂಪೂರ್ಣ ಲಾಕ್ ಡೌನ್ ಹೇರಲಾಗಿದೆ.
ಮಹಾರಾಷ್ಟ್ರದಲ್ಲಿ ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಆ ರಾಜ್ಯ ಅಮರಾವತಿಯಲ್ಲಿ ಒಂದು ವಾರ್ ಸಂಪೂರ್ಣ ಲಾಕ್ ಡೌನ್ ಹೇರಲಾಗಿದೆ. ಸೋಮವಾರ ಅಂದರೆ ಇಂದು ಸಂಜೆಯಿಂದಲೇ ಲಾಕ್ಡೌನ್ ನಿಯಮ ಜಾರಿಗೆ ಬರಲಿದ್ದು. ಮುಂದಿನ ಏಳು ದಿನ ಲಾಕ್ಡೌನ್ ಜಾರಿಯಲ್ಲಿರಲಿದೆ. ಈ ವೇಳೆ ಕೇವಲ ಅಗತ್ಯ ಸೇವೆಗಳು ಮಾತ್ರ ಸಿಗಲಿವೆ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ.
ಈ ಕುರಿತಾಗಿ ಮಾಹಿತಿ ನೀಡಿರುವ ಸಚಿವೆ ಯಶೋಮತಿ ಠಾಕೂರ್, ಅಮರಾವತಿಯ ಅಚಲ್ ನಗರವನ್ನು ಹೊರತುಪಡಿಸಿ ಇನ್ನುಳಿದ ಪ್ರದೇಶಗಳಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ಈ ಸಮಯದಲ್ಲಿ ಅಗತ್ಯ ಸೇವೆಗಳಿಗೆ ಅನುಮತಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇನ್ನು ಈ ಹಿಂದೆಯೇ ಅಮರಾವತಿಯಲ್ಲಿ ವಾರಾಂತ್ಯದಲ್ಲಿ ಲಾಕ್ಡೌನ್ ಅನ್ನು ಜಿಲ್ಲಾಡಳಿತ ಘೋಷಿಸಿದ್ದು, ಶನಿವಾರ ರಾತ್ರಿ 8 ಗಂಟೆಯಿಂದ ಆರಂಭಗೊಂಡು ಸೋಮವಾರ ಬೆಳಿಗ್ಗೆ 7 ಗಂಟೆಯ ವರೆಗೆ ಲಾಕ್ ಡೌನ್ ಜಾರಿಗೆ ತಂದಿತ್ತು. ಆದರೂ ಕೊರೋನಾ ವೈರಸ್ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಇದೀಗ ಒಂದು ವಾರಗಳ ಕಾಲ ಸಂಪೂರ್ಣ ಲಾಕ್ ಡೌನ್ ಮಾಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.
ಜನರು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ 8–10 ದಿನಗಳಲ್ಲಿ ಎರಡನೇ ಲಾಕ್ಡೌನ್ ಹೇರುವ ಬಗ್ಗೆ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಮುಖ್ಯ ಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ವಿದರ್ಭ ವಲಯದ ಅಮರಾವತಿ ಜಿಲ್ಲೆಯಲ್ಲಿ ಒಂದು ವಾರ ಲಾಕ್ಡೌನ್ ಹೇರಲಾಗಿದೆ. ಫೆಬ್ರುವರಿ 22ರ ರಾತ್ರಿ 8ರಿಂದ ಮಾರ್ಚ್ 1ರ ಬೆಳಿಗ್ಗೆ 8 ಗಂಟೆವರೆಗೆ ಲಾಕ್ಡೌನ್ ಜಾರಿಯಲ್ಲಿರಲಿದೆ. ವೈರಸ್ ಹರಡುವುದನ್ನು ತಡೆಯುವ ಉದ್ದೇಶದಿಂದ ಅಮರಾವತಿ ವಿಭಾಗದ ಇತರ ನಾಲ್ಕು ಜಿಲ್ಲೆಗಳಾದ ಅಕೋಲಾ, ವಾಶಿಮ್, ಬುಲ್ದಾನ ಮತ್ತು ಯವತ್ಮಾಲ್ನಲ್ಲಿ ಕೆಲವು ನಿರ್ಬಂಧಗಳನ್ನು ಜಾರಿಗೊಳಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪುಣೆಯಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ, ರಾತ್ರಿ 11ರಿಂದ ಬೆಳಿಗ್ಗೆ 6ರವರೆಗೆ ಜನರ ಸಂಚಾರಕ್ಕೆ ನಿರ್ಬಂಧ ಹೇರಲು ನಿರ್ಧರಿಸಲಾಗಿದೆ. ಶಾಲೆ, ಕಾಲೇಜು ಹಾಗೂ ಖಾಸಗಿ ಕೋಚಿಂಗ್ ಕೇಂದ್ರಗಳನ್ನು ಫೆ.28ರವರೆಗೆ ಮುಚ್ಚುವಂತೆ ಸೂಚಿಸಲಾಗಿದೆ. ಹಾಸ್ಟೆಲ್ ಹಾಗೂ ರೆಸ್ಟೋರೆಂಟ್ಗಳನ್ನು ಪ್ರತಿನಿತ್ಯ 11 ಗಂಟೆಗೆ ಮುಚ್ಚುವಂತೆ ತಿಳಿಸಲಾಗಿದೆ ಎಂದು ಪುಣೆ ವಿಭಾಗೀಯ ಆಯುಕ್ತ ಸೌರಭ್ ರಾವ್ ತಿಳಿಸಿದ್ದಾರೆ.
ಪುಣೆ ಉಸ್ತುವಾರಿ ಸಚಿವರೂ ಆಗಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಕೆಲವು ನಿರ್ಬಂಧಗಳನ್ನು ಮರಳಿ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಂಟೈನ್ಮೆಂಟ್ ವಲಯಗಳನ್ನು ಗುರುತಿಸುವುದು, ಕೋವಿಡ್ ಆರೈಕೆ ಕೇಂದ್ರಗಳ ಮರು ಸ್ಥಾಪನೆ, ಸಂಪರ್ಕಿತರ ಪತ್ತೆಹಚ್ಚುವಿಕೆ ಮತ್ತು ಪರೀಕ್ಷೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಸ್ಥಳೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಬಂಧ ಹೇರುವ ನಿರ್ಧಾರ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಶನಿವಾರ, ಪುಣೆ ವಿಭಾಗದಲ್ಲಿ 998 ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿನಿಂದ 9 ಮಂದಿ ಮೃತಪಟ್ಟಿದ್ದಾರೆ. ಕಳೆದ ಮೂರು ತಿಂಗಳಿನಿಂದ ಜಿಲ್ಲೆಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ರಾವ್ ಹೇಳಿದರು. ಆದರೆ, ಈಗ ಕೋವಿಡ್ ಪ್ರಕರಣಗಳ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.
ಇಂದೋರ್ನಲ್ಲಿ ಏರುಮುಖ: ಮಧ್ಯಪ್ರದೇಶದಲ್ಲಿ ಫೆ.14ರ ಬಳಿಕ ನಿತ್ಯವೂ 200ಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ರಾಜ್ಯದ ಕೈಗಾರಿಕಾ ತಾಣ ಎನಿಸಿರುವ ಇಂದೋರ್ನಲ್ಲಿ ಪ್ರಕರಣಗಳು ಏರುಗತಿಯಲ್ಲಿವೆ.
ಇಂದೋರ್ನಲ್ಲಿ ಸಂಗ್ರಹಿಸಿದ 100 ರಕ್ತದ ಮಾದರಿಗಳನ್ನು ದೆಹಲಿಯ ರಾಷ್ಟ್ರೀಯ ಸೋಂಕು ನಿಯಂತ್ರಣ ಕೇಂದ್ರ ಮತ್ತು ಪುಣೆ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. ರೂಪಾಂತರಗೊಂಡ ಕೊರೊನಾ ವೈರಸ್ ಈ ರಕ್ತದ ಮಾದರಿಗಳಲ್ಲಿ ಇದೆಯೇ ಎಂದು ತಿಳಿದುಕೊಳ್ಳುವುದು ಇದರ ಉದ್ದೇಶ.
ಕೊರೊನಾ ಸೋಂಕು ಪ್ರಕರಣಗಳು ಇಳಿಮುಖವಾಗುತ್ತಿದ್ದಂತೆ ಜನರು ಬೇಜವಾಬ್ದಾರಿಯಿಂದ ವರ್ತಿಸಿದ್ದೇ ಪ್ರಕರಣಗಳು ಮತ್ತೆ ಏರಿಕೆಯಾಗಲು ಕಾರಣ ಎಂದು ಮಧ್ಯಪ್ರದೇಶದ ಇಂದೋರ್ ನೋಡಲ್ ಅಧಿಕಾರಿ ಅಮಿತ್ ಮಲಕರ್ ತಿಳಿಸಿದ್ದಾರೆ.
‘ಇತ್ತೀಚಿನ ದಿನಗಳಲ್ಲಿ ಜನರು ಮಾಸ್ಕ್ ಧರಿಸದೇ ಓಡಾಡುತ್ತಿದ್ದಾರೆ. ವ್ಯಕ್ತಿಗಳ ನಡುವೆ ಅಂತರವೂ ಕಾಣುತ್ತಿಲ್ಲ. ಸ್ಯಾನಿಟೈಸರ್ ಬಳಕೆ ಮರೆತೇಹೋಗಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಜನವರಿಯಲ್ಲಿ ದಕ್ಷಿಣ ಆಫ್ರಿಕಾದ ರೂಪಾಂತರಗೊಂಡ ವೈರಸ್ ಮಾದರಿಯು ನಾಲ್ಕು ಜನರಲ್ಲಿ ಕಂಡುಬಂದಿತ್ತು ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಹೇಳಿತ್ತು. ಫೆಬ್ರುವರಿ ಮೊದಲ ವಾರದಲ್ಲಿ ಬ್ರೆಜಿಲ್ ರೂಪಾಂತರ ವೈರಾಣು ಒಬ್ಬ ವ್ಯಕ್ತಿಯಲ್ಲಿ ಗೋಚರವಾಗಿತ್ತು.
ಸಹಜ ಸ್ಥಿತಿಯತ್ತ ದೆಹಲಿ: ಈ ಮಧ್ಯೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಎಲ್ಲ ಚಟುವಟಿಕೆಗಳನ್ನೂ ಪುನರ್ ಆರಂಭಿಸಲಾಗುತ್ತಿದೆ. ಸಾಂಕ್ರಾಮಿಕ ರೋಗದ ಹರಡುವಿಕೆ ತಡೆಗಾಗಿ ಭಾಗಶಃ ಕಾರ್ಯ ನಿರ್ವಹಿಸುತ್ತಿದ್ದ ಶಾಲಾ ಕಾಲೇಜುಗಳು, ನ್ಯಾಯಾಲಯಗಳು, ಸಾರ್ವಜನಿಕ ಸಾರಿಗೆ ಮತ್ತಿತರ ಸೇವೆಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳುತ್ತಿವೆ.
ಲಸಿಕೆ ವೇಗ ಹೆಚ್ಚಳಕ್ಕೆ ಸೂಚನೆ: ಕೆಲವು ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಲಸಿಕೆ ನೀಡಿಕೆ ವೇಗವನ್ನು ಗಣನೀಯವಾಗಿ ಹೆಚ್ಚಿಸುವ ಅಗತ್ಯವಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳಿಗೆ ಪತ್ರ ಬರೆದಿದೆ. ಹೆಚ್ಚಿನ ಸಂಖ್ಯೆಯ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಇನ್ನೂ ಲಸಿಕೆಯನ್ನು ಪಡೆಯಬೇಕಿದೆ ಎಂದು ಶುಕ್ರವಾರ (ಫೆ.19) ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
‘ತಾಳ್ಮೆಯಿಂದ ಕಾಯಿರಿ’: ಕೋವಿಶೀಲ್ಡ್ ಲಸಿಕೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚುತ್ತಿದ್ದು, ಭಾರತದ ಅಗತ್ಯಗಳನ್ನು ಪೂರೈಸುವವರೆಗೆ ಇತರ ದೇಶಗಳು ಕಾಯಬೇಕು ಮತ್ತು ತಾಳ್ಮೆಯಿಂದಿರಬೇಕು ಎಂದು ಸೀರಂ ಇನ್ಸ್ಟಿಟ್ಯೂಟ್ ಹೇಳಿದೆ.
ಹೊಸ ತಳಿಗಳು ಅಪಾಯಕಾರಿ: ಮಹಾರಾಷ್ಟ್ರದಲ್ಲಿ ಪತ್ತೆಯಾಗಿರುವ ಕೊರೊನಾ ವೈರಸ್ನ ರೂಪಾಂತರ ತಳಿಗಳು ಬೇಗ ಹರಡಬಲ್ಲ ಸಾಮರ್ಥ್ಯವುಳ್ಳವು. ಹಾಗೆಯೇ ಅವು ಅಪಾಯಕಾರಿ’ ಎಂದು ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಹೇಳಿದ್ದಾರೆ. ವೈರಾಣುವಿಗೆ ಪ್ರತಿಕಾಯಗಳನ್ನು ಸೃಷ್ಟಿಸಿಕೊಂಡಿರುವ ವ್ಯಕ್ತಿಗೆ ಕೂಡ ರೂಪಾಂತರ ವೈರಾಣುವಿನಿಂದ ಸೋಂಕು ತಗಲುಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ವೈರಸ್ನ 240 ಹೊಸ ತಳಿಗಳು ಭಾರತದಾದ್ಯಂತ ಕಾಣಿಸಿಕೊಂಡಿವೆ. ಕಳೆದ ಒಂದು ವಾರದಲ್ಲಿ ಕೆಲವು ರಾಜ್ಯಗಳಲ್ಲಿ ಪ್ರಕರಣಗಳು ಹೆಚ್ಚುತ್ತಿರುವುದರ ಹಿಂದೆ ಈ ಹೊಸ ತಳಿಗಳು ಇವೆ’ ಎಂದು ಮಹಾರಾಷ್ಟ್ರ ಕೋವಿಡ್ ಕಾರ್ಯಪಡೆ ಸದಸ್ಯ ಡಾ. ಶಶಾಂಕ್ ಜೋಶಿ ಹೇಳಿದ್ದಾರೆ.
ಮಹಾರಾಷ್ಟ್ರ, ಕೇರಳ, ಮಧ್ಯಪ್ರದೇಶ, ಛತ್ತೀಸಗಡ ಮತ್ತು ಪಂಜಾಬ್ನಲ್ಲಿ ಹೊಸ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ.
ಭಾರತಕ್ಕೆ ವಿಶ್ವಸಂಸ್ಥೆ ಶ್ಲಾಘನೆ: ಸಾಂಕ್ರಾಮಿಕ ರೋಗದ ವಿರುದ್ಧದ ಜಾಗತಿಕ ಹೋರಾಟದಲ್ಲಿ ಭಾರತದ ನಾಯಕತ್ವವನ್ನು ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಅವರು ಶ್ಲಾಘಿಸಿದ್ದಾರೆ. ವಿಶ್ವ ಮಾರುಕಟ್ಟೆಗೆ ಕೋವಿಡ್ ಲಸಿಕೆಗಳನ್ನು ಪೂರೈಸುವ ಯತ್ನವನ್ನು ಅವರು ಪ್ರಶಂಸಿಸಿದ್ದಾರೆ.
ಭಾರತದ ಕಾಯಂ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ ಅವರು ಟ್ವೀಟ್ ಮಾಡಿದ್ದು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರಿಗೆ ಗುಟೆರಸ್ ಬರೆದ ಪತ್ರದ ಬಗ್ಗೆ ಉಲ್ಲೇಖಿಸಿದ್ದಾರೆ. ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗೆ 2 ಲಕ್ಷ ಕೋವಿಡ್ ಲಸಿಕೆಗಳನ್ನು ನೀಡಿದ ಭಾರತದ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೋವ್ಯಾಕ್ಸಿನ್ ಬಳಕೆ ಕಡಿಮೆ: ಅಧಿಕೃತ ಲಸಿಕೆ ವಿತರಣಾ ಮಾಹಿತಿಯ ಪ್ರಕಾರ, 17 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಕೋವ್ಯಾಕ್ಸಿನ್ನ 100ಕ್ಕಿಂತಲೂ ಕಡಿಮೆ ಡೋಸ್ ಬಳಕೆಯಾಗಿವೆ. ಆರು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊವ್ಯಾಕ್ಸಿನ್ನ ಒಂದೇ ಡೋಸ್ ಅನ್ನೂ ಬಳಸಿಲ್ಲ.
ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕ, ತಮಿಳುನಾಡಿನಲ್ಲಿ ಅತಿಕಡಿಮೆ ಪ್ರಮಾಣದಲ್ಲಿ ಕೋವ್ಯಾಕ್ಸಿನ್ ಬಳಕೆಯಾಗಿದೆ. ಫೆಬ್ರುವರಿ 20ರವರೆಗಿನ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಕೋವಿಶೀಲ್ಡ್ನ 5.40 ಲಕ್ಷ ಡೋಸ್ ಬಳಸಿದ್ದರೆ, ಕೋವ್ಯಾಕ್ಸಿನ್ನ 5,873 ಡೋಸ್ಗಳು ಬಳಕೆಯಾಗಿವೆ. | |