ಸಂಕಷ್ಟಕ್ಕೆ ಗುರಿಯಾಗಿದ್ದ ಸಣ್ಣ ಉದ್ಯಮಗಳಿಗೆ ಜಿಎಸ್ ಟಿ ಕೌನ್ಸಿಲ್ ನಿಂದ ತಾತ್ಕಾಲಿಕ ರಿಲೀಫ್
ನವದೆಹಲಿ: ಕೋವಿಡ್-19 ಸಂಕಷ್ಟಕ್ಕೆ ಗುರಿಯಾಗಿದ್ದ ಸಣ್ಣ ಉದ್ಯಮಗಳಿಗೆ ಜಿಎಸ್ ಟಿ ಕೌನ್ಸಿಲ್ ನಿಂದ ತಾತ್ಕಾಲಿಕ ರಿಲೀಫ್
ಕೊರೋನಾ ಸಂಕಷ್ಟಕ್ಕೆ ಗುರಿಯಾಗಿರುವ ಸಣ್ಣ ಉದ್ಯಮಗಳಿಗೆ ಜಿಎಸ್ ಟಿ ಕೌನ್ಸಿಲ್ ತಾತ್ಕಾಲಿಕ ರಿಲೀಫ್ ಘೋಷಣೆ ಮಾಡಿದ್ದು, ಜಿಎಸ್ ಟಿ ಆರ್-3ಬಿ ರಿಟರ್ನ್ಸ್ ನ ಸಲ್ಲಿಕೆ ವಿಳಂಬಕ್ಕೆ ವಿಧಿಸಲಾಗುವ ಬಡ್ಡಿ ದರವನ್ನು ಅರ್ಧದಷ್ಟು ಕಡಿತಗೊಳಿಸುವುದಾಗಿ ಹೇಳಿದೆ.
2020ರ ಫೆಬ್ರವರಿ, ಮಾರ್ಚ್ ಏಪ್ರಿಲ್ ತಿಂಗಳುಗಳ ರಿಟರ್ನ್ಸ್ ಸಲ್ಲಿಕೆಗೆ ಈ ವಿನಾಯಿತಿ ನೀಡಲಾಗಿದೆ ಎಂದು ಜಿಎಸ್ ಟಿ ಕೌನ್ಸಿಲ್ ಹೇಳಿದೆ. ಸೆಪ್ಟೆಂಬರ್ 30 ವರೆಗೆ ರಿಟರ್ನ್ಸ್ ಸಲ್ಲಿಕೆಯಲ್ಲಿ ವಿಳಂಬವಾದರೆ ಬಡ್ಡಿ ದರವನ್ನು ಈ ಹಿಂದಿದ್ದ ಶೇ.18ರ ಬದಲಿಗೆ ಶೇ.9 ರಷ್ಟು ವಿಧಿಸಲಾಗುತ್ತದೆ. ಇದರಿಂದಾಗಿ ವಾರ್ಷಿಕ 5 ಕೋಟಿ ಹಾಗೂ ಅದಕ್ಕಿಂತ ಕಡಿಮೆ ಆದಾಯ ಹೊಂದಿರುವ ಸಣ್ಣ ಉದ್ಯಮಗಳ ತೆರಿಗೆ ಪಾವತಿಸುವವರಿಗೆ ಸಹಾಯವಾಗಲಿದೆ.
ಮೂರು ತಿಂಗಳವರೆಗೆ ಸಣ್ಣ ತೆರಿಗೆ ಪಾವತಿದಾರರಿಗೆ ನೋಟಿಫೈಯ್ಡ್ ದಿನಾಂಕಗಳವರೆಗೆ ಯಾವುದೇ ತೆರಿಗೆ ವಿಧಿಸುವುದಿಲ್ಲ. ಅಲ್ಲಿಂದ ಮುಂದಕ್ಕೆ ಸೆಪ್ಟೆಂಬರ್ 30ವರೆಗೆ ಶೇ.9 ರಷ್ಟು ಬಡ್ಡಿ ವಿಧಿಸಲಾಗುತ್ತದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಇದೇ ವೇಳೆ 2017ರಿಂದ 2020 ರ ಜನವರಿ ಅವಧಿಗೆ ಜಿಎಸ್ ಟಿಆರ್-3 ಬಿ ರಿಟರ್ನ್ಸ್ ಸಲ್ಲಿಕೆ ವಿಳಂಬಕ್ಕೆ ವಿಧಿಸಲಾಗುತ್ತಿದ್ದ ಶುಲ್ಕವನ್ನೂ ಕಡಿತಗೊಳಿಸಲು ಜಿಎಸ್ ಟಿ ಪರಿಷತ್ ನಿರ್ಧರಿಸಿದ್ದು, 500 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ.