7 ವರ್ಷ ಮೇಲ್ಪಟ್ಟ ಪ್ರಕರಣ ಇತ್ಯರ್ಥಗೊಳಿಸಿ ಹೈಕೋರ್ಟ್‌ ನ್ಯಾಯಾಧೀಶ ಸೂರಜ್‌ ಗೋವಿಂದರಾಜ್

ಉಡುಪಿ: ಜಿಲ್ಲೆಯ ನ್ಯಾಯಾಲಯಗಳಲ್ಲಿ 7 ವರ್ಷ ಮೇಲ್ಪಟ್ಟ ಪ್ರಕರಣವನ್ನು ವರ್ಷಾಂತ್ಯದೊಳಗೆ ಪೂರ್ಣಗೊಳಿ ಸಬೇಕು ಎಂದು ಹೈಕೋರ್ಟ್‌ ನ್ಯಾಯಾಧೀಶರಾದ ಸೂರಜ್‌ ಗೋವಿಂದರಾಜ್ ಸೂಚನೆ ನೀಡಿದರು.‌

ಶನಿವಾರ ಉಡುಪಿ ವಕೀಲರ ಸಂಘಕ್ಕೆ ಭೇಟಿ ನೀಡಿ ಮಾತನಾಡಿದ ಅವರು, 7 ವರ್ಷಕ್ಕಿಂತ ಹಳೆಯ ಪ್ರಕರಣಗಳನ್ನು ಕಾಲಮಿತಿಯೊಳಗೆ ಇತ್ಯರ್ಥಗೊಳಿಸಲು ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಅಧೀನ ನ್ಯಾಯಾಲಯಗಳಿಗೆ ಸೂಚನೆ ನೀಡಿದ್ದಾರೆ. ಅದರಂತೆ ಬಾಕಿ ಉಳಿದಿರುವ 10 ತಿಂಗಳುಗಳಲ್ಲಿ ಪ್ರಕರಣ ವಿಲೇವಾರಿ ಮಾಡಬೇಕು. ಪ್ರಕರಣಗಳನ್ನು ವರ್ಷಾನುಗಟ್ಟಲೆ ವಿಲೇವಾರಿ ಮಾಡದೆ ಉಳಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಇದರಿಂದ ನ್ಯಾಯಾಲಯಕ್ಕೆ ಅಲೆದು ಕಕ್ಷಿದಾರರು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಕಿವಿಮಾತು ಹೇಳಿದರು.

ಉಡುಪಿ ಜಿಲ್ಲೆಯ ನ್ಯಾಯಾಲ ಯಗಳಲ್ಲಿ 14,520 ಸಿವಿಲ್ ಪ್ರಕರಣಗಳು ಹಾಗೂ 19,886 ಕ್ರಿಮಿನಲ್ ಕೇಸ್‌ಗಳು ಸೇರಿ 34,406 ಪ್ರಕರಣಗಳು ಬಾಕಿ ಇವೆ. ಉಡುಪಿಯಂತಹ ಚಿಕ್ಕ ಜಿಲ್ಲೆಯಲ್ಲಿ ಹೆಚ್ಚು ಪ್ರಕರಣಗಳು ಬಾಕಿ ಇರುವುದು ಒಳ್ಳೆಯ ಬೆಳವಣಿಗೆಯಲ್ಲ. ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ನ್ಯಾಯಾಧೀಶರ ಸಂಘಟಿತ ಪ್ರಯತ್ನದಿಂದ ಹಳೆಯ ಪ್ರಕರಣಗಳನ್ನು ಇತ್ಯರ್ಥಗೊಳಿಸಬಹುದು ಎಂದು ನ್ಯಾಯಾಧೀಶರು ಸಲಹೆ ನೀಡಿದರು.

10 ತಿಂಗಳಲ್ಲಿ ಎಷ್ಟು 7 ವರ್ಷ ಹಳೇಯ ಕೇಸ್‍ಗಳು ಇತ್ಯರ್ಥಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಕೇಸ್‍ಗಳ ಪ್ರಾಮುಖ್ಯತೆಯ ಆದರದ ಮೇಲೆ 7 ವರ್ಷಕ್ಕಿಂತಲೂ ಹಳೇಯ ಪ್ರಕರಣಗಳನ್ನು ವಕೀಲರಿಗೆ ಹಂಚಿಕೆ ಮಾಡಲಾಗಿದೆ. ಯಾವುದೇ ವಕೀಲರಿಗೆ ತಮಗೆ ಹಂಚಿಕೆ ಮಾಡುವ ಯವುದೇ ಸೂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಕಾದ ತಯಾರಿ ಮಾಡಿಕೊಂಡು ಆದಷ್ಟು ಬೇಗ ಪ್ರಕರಣವನ್ನು ಇತ್ಯರ್ಥ ಪಡಿಸಿ ಎಂದು ಸಲಹೆ ನೀಡಿದರು.

ಕೋವಿಡ್‌–19 ಕಾರಣದಿಂದ ಅಡ್ಡಿಯಾಗಿದ್ದ ನ್ಯಾಯಾಲಯಗಳ ಕಾರ್ಯ ಕಲಾಪಗಳು ಪುನರರಾಂಭವಾಗಿದ್ದು, ಎಂದಿನಂತೆ ನ್ಯಾಯದಾನ ಪ್ರಕ್ರಿಯೆ ನಡೆಯುತ್ತಿದೆ. ಪ್ರಕರಣಗಳ ವಿಚಾರಣೆ ನ್ಯಾಯಾಲಯದಲ್ಲಿ ಆರಂಭವಾಗಿವೆ ಎಂದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜೆ.ಎನ್‌.ಸುಬ್ರಹ್ಮಣ್ಯ, ವಕೀಲರ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರೊನಾಲ್ಡ್ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *

error: Content is protected !!