ರಾಮ ಮಂದಿರವಲ್ಲ, ಆರ್ ಎಸ್ಎಸ್ ಮಂದಿರ ಹೇಳಿದ ಪಿಎಫ್ಐ ವಿರುದ್ಧ ಕ್ರಮಕ್ಕೆ ಗೃಹ ಸಚಿವರ ಸೂಚನೆ
ಬೆಂಗಳೂರು: ದೇಶ ವಿರೋಧಿ ಚಟುವಟಿಕೆಯಲ್ಲಿ ನಿರತವಾಗಿ ಹೇಳಿಕೆ ನೀಡುತ್ತಿರುವ ಪಿಎಫ್ಐ ಸಂಘಟನೆ ನಾಯಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಖಡಕ್ ಸೂಚನೆ ನೀಡಿದ್ದಾರೆ.
ಮಂಗಳೂರಿನಲ್ಲಿ ಪಿಎಫ್ಐ ಮುಖಂಡರು ನೀಡಿರುವ ಹೇಳಿಕೆ ದೇಶ ವಿರೋಧಿ ಮತ್ತು ಅಸಂವಿಧಾನಿಕ ಎಂದು ಹೇಳಿರುವ ಬೊಮ್ಮಾಯಿ ಸಂಘಟನೆ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಿರುವುದಾಗಿ ಹೇಳಿದ್ದಾರೆ.
ಅಯೋಧ್ಯೆ ರಾಮಮಂದಿರ ಸಂಬಂಧ ಸುಪ್ರೀಂ ಕೋರ್ಟ್ ಈಗಾಗಲೇ ಆದೇಶ ನೀಡಿದೆ. ಈ ಕುರಿತು ಪಿಎಫ್ಐ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಿದೆ. ಅಲ್ಲದೆ ದೇಶ ಭಕ್ತ ಸಂಘಟನೆಯಾದ ಆರ್ ಎಸ್ ಎಸ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಈ ಮೂಲಕ ಪಿಎಫ್ಐ ತನ್ನ ನಿಜ ಬಣ್ಣ ಬಯಲಾ ಮಾಡಿದೆ ಎಂದರು.
ಮಂಗಳೂರಿನ ಉಳ್ಳಾಲದಲ್ಲಿ ಸಮಾವೇಶವೊಂದರಲ್ಲಿ ಮಾತನಾಡಿದ್ದ ಅನೀಸ್ ಅದು ರಾಮ ಮಂದಿರವಲ್ಲ, ಆರ್ ಎಸ್ಎಸ್ ಮಂದಿರ. ಹೀಗಾಗಿ ಯಾರೂ ನಿರ್ಮಾಣಕ್ಕೆ 1 ಪೈಸೆ ಸಹ ನೀಡಬೇಡಿ ಎಂದು ಹೇಳಿದ್ದರು.
ಇದೇ ವೇಳೆ ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್ ಎಸ್ಎಸ್) ಹರಿಹಾಯ್ದ ಅನೀಸ್, ಪಿಎಫ್ಐ ನ ಶತ್ರು ಅಂದರೆ ಅದು ಆರ್ ಎಸ್ಎಸ್ ಮಾತ್ರ. ದೇಶದಲ್ಲಿರೋ ಆರ್ ಎಸ್ ಎಸ್ ಕ್ಯಾನ್ಸರ್ ಇದ್ದಂತೆ, ಅದು ವಾಸಿ ಆಗಲ್ಲ ಎಂದು ಹೇಳಿದ್ದಾರೆ.