ಲಾಕ್‌ಡೌನ್: ವೇತನ ಪಾವತಿಸದ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವಂತಿಲ್ಲ ಸುಪ್ರೀಂ
ನವದೆಹಲಿ: ಖಾಸಗಿ ಕಂಪೆನಿಗಳ ಮಾಲೀಕರಿಗೆ ಸಮಾಧಾನದ ಸುದ್ದಿ ನೀಡಿರುವ ಸುಪ್ರೀಂ ಕೋರ್ಟ್, ಲಾಕ್ ಡೌನ್ ಸಮಯದಲ್ಲಿ ಕೆಲಸಗಾರರಿಗೆ ವೇತನ ನೀಡದಿರುವ ಕಂಪೆನಿಗಳ ಮಾಲೀಕರ ವಿರುದ್ಧ ಜುಲೈ ಕೊನೆಯವರೆಗೆ ಕಠಿಣ ಕ್ರಮ ತೆಗೆದುಕೊಳ್ಳಬಾರದು ಎಂದು ಆದೇಶ ನೀಡಿದೆ.
ವೇತನ ಪಾವತಿ ವಿಚಾರದಲ್ಲಿ ಕಂಪೆನಿ ಮಾಲೀಕರು ಮತ್ತು ಕೆಲಸಗಾರರ ಮಧ್ಯೆ ಹೊಂದಾಣಿಕೆಯ ಒಪ್ಪಂದವೇರ್ಪಡಲು ರಾಜ್ಯ ಸರ್ಕಾರಗಳು ಸಹಾಯ ಮಾಡಬೇಕಾಗಿದ್ದು ಸಂಬಂಧಪಟ್ಟ ಕಾರ್ಮಿಕ ಆಯುಕ್ತರಿಗೆ ವರದಿ ಸಲ್ಲಿಸಬೇಕು ಎಂದು ಹೇಳಿದೆ.
ಲಾಕ್ ಡೌನ್ ಸಮಯದಲ್ಲಿ ಕೆಲಸಗಾರರಿಗೆ ಕಡ್ಡಾಯವಾಗಿ ಸಂಪೂರ್ಣ ವೇತನ ನೀಡಬೇಕೆಂದು ಮಾರ್ಚ್ 29ರಂದು ಹೊರಡಿಸಿದ್ದ ಆದೇಶದ ಕಾನೂನು ಬದ್ಧತೆ ಬಗ್ಗೆ ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ 4 ವಾರಗಳ ಹೆಚ್ಚುವರಿ ಕಾಲಾವಕಾಶವನ್ನು ಸಹ ಇದೇ ಸಂದರ್ಭದಲ್ಲಿ ನೀಡಿದೆ.
ಕಳೆದ ಮಾರ್ಚ್ 29ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ, ಕೊರೋನಾ ಲಾಕ್ ಡೌನ್ ಸಮಯದಲ್ಲಿ ಕೆಲಸಗಾರರಿಗೆ ಕಂಪೆನಿಗಳು ವೇತನ ಕಡಿತ ಮಾಡದೆ ಸಂಪೂರ್ಣ ನೀಡಬೇಕು ಎಂದು ಹೇಳಿತ್ತು.
ಇಲ್ಲಿ ಉದ್ಯಮಿಗಳು ಮತ್ತು ಕಾರ್ಮಿಕರಿಗೆ ಪರಸ್ಪರ ಅಗತ್ಯವಿದೆ ಎಂದು ವಾದಿಸಲಾಗುವುದಿಲ್ಲ. 50 ದಿನಗಳವರೆಗೆ ವೇತನ ಪಾವತಿಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸಲು ಪ್ರಯತ್ನಿಸಬೇಕು ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ , ಸಂಜಯ್ ಕಿಶನ್ ಕೌಲ್ ಮತ್ತು ಎಂಆರ್ ಶಾ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.
ಕೇಂದ್ರ ಸರ್ಕಾರ ಹೊರಡಿಸಿದ್ದ ಸುತ್ತೋಲೆಗೆ ವಿರುದ್ಧವಾಗಿ ಹಲವು ಕಂಪೆನಿಗಳು ಸಲ್ಲಿಸಿರುವ ಅರ್ಜಿಗಳ ಬಾಕಿ ವಿಚಾರಣೆಯನ್ನು ಇಂದು ಸುಪ್ರೀಂ ಕೋರ್ಟ್ ಜುಲೈ ಕೊನೆ ವಾರಕ್ಕೆ ಮುಂದೂಡಿದೆ.