ಫೆ.22: ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬಂದ್ ಗೆ ಕರೆ
ಉಡುಪಿ: ಕೇಂದ್ರ ಸರಕಾರದ ಆದೇಶದಂತೆ ಫಾಸ್ಟ್ಯಾಗ್ ಕಡ್ಡಾಯಗೊಳಿಸಿದ್ದು ಸಾಸ್ತಾನ ಟೋಲ್ ಗೇಟ್ ನಲ್ಲಿ ಸ್ಥಳೀಯರಿಗೆ ಈ ಹಿಂದೆ ಇದ್ದ ಟೋಲ್ ಶುಲ್ಕ ವಿನಾಯತಿಯನ್ನು ಮುಂದುವರೆಸುವಂತೆ ಆಗ್ರಹಿಸಿ ಸೋಮವಾರ (ಫೆ.22)ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬಂದ್ ಕರೆ ನೀಡಿದ್ದು, ಬೃಹತ್ ಪ್ರತಿಭಟನೆ ನಡೆಸಲು ಹೆದ್ದಾರಿ ಜಾಗೃತಿ ಸಮಿತಿ ನಿರ್ಧರಿಸಿದೆ.
ಈ ಕುರಿತು ಬುಧವಾರ ಸಾಸ್ತಾನ ಶಿವಕೃಪಾ ಕಲ್ಯಾಣ ಮಂಟಪದಲ್ಲಿ ನಡೆದ ಹೆದ್ದಾರಿ ಜಾಗೃತಿ ಸಮಿತಿಯ ಸಭೆಯಲ್ಲಿ ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಗಿದ್ದು ಅಂದು ಫೆ.22 ರಂದು ಕೋಟ ಜಿಪಂ ವ್ಯಾಪ್ತಿಯಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವುದರೊಂದಿಗೆ ಅಂದು ಬೆಳಿಗ್ಗೆ 9.30 ರಿಂದ ಟೋಲ್ ಪ್ಲಾಜಾದಲ್ಲಿ ಶಾಂತಿಯುತವಾಗಿ ಬೃಹತ್ ಜನಸಮೂಹದೊಂದಿಗೆ ಪ್ರತಿಭಟನೆ ನಡೆಸಲಾಗುವುದು. ಅಂದೇ ಸಂಸದರ ನೇತೃತ್ವದಲ್ಲಿ ದಿಶಾ ಸಭೆ ನಡೆಸಲು ನಿರ್ಧರಿಸಿರುವ ಮಾಹಿತಿ ಇದ್ದು, ಈ ಪ್ರತಿಭಟನೆ ಮೂಲಕ ಜಿಲ್ಲಾಡಳಿತದ ಮೇಲೆ ಒತ್ತಡ ಹೇರಲಾಗುವುದು ಎಂದು ಸಮಿತಿಯ ಅಧ್ಯಕ್ಷ ಶ್ಯಾಮಸುಂದರ ನಾಯಿರಿ ಹೇಳಿದರು.
ಪ್ರತಿಭಟನೆ ಪ್ರಯುಕ್ತ ಹೆಚ್ಚಿನ ಪ್ರಚಾರ ನೀಡುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮ ಪಂಚಾಯತ್ ಗಳ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಾರ್ಡ್ ಮಟ್ಟದಲ್ಲಿ ನೀಡಲು ಪ್ರತಿಯೊಬ್ಬರೂ ಸಹಕಾರ ನೀಡುವಂತೆ ಈ ಮೂಲಕ ಪ್ರತಿಭಟನೆಯಲ್ಲಿ 7000 ಕ್ಕೂ ಅಧಿಕ ನಾಗರಿಕರು ಭಾಗವಹಿಸುವಂತೆ ಮಾಡಲಾಗುವುದು ಎಂದರು.
ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ದಿನೇಶ್ ಮೆಂಡನ್ ಜನರ ಮೂಲಭೂತ ಹೋರಾಟಕ್ಕೆ ಸಮಸ್ಯೆ ಆದಾಗ ಜನಪ್ರತಿನಿಧಿಗಳ ಬೆಂಬಲ ಲಭಿಸದೆ ಹೋದಾಗ ಹೋರಾಟ ಯಶಸ್ವಿಯಾಗಲು ಕಷ್ಟಸಾಧ್ಯ. ಜಿಲ್ಲಾಡಳಿತ ಕೂಡ ನಮ್ಮ ಕೂಗನ್ನು ಕೇಳದೆ ಹೋದಾಗ ಜನಪ್ರತಿನಿಧಿಳಾದವರು ಜಿಲ್ಲಾಡಳಿತಕ್ಕೆ ಜನರ ಮೂಲಭೂತ ಹಕ್ಕಿನ ವಿಚಾರವನ್ನು ತಿಳಿಹೇಳಬೇಕಾಗಿದೆ.ನಾವು ಜನಪ್ರತಿನಿಧಿಗಳನ್ನು ಆರಿಸಿ ಕಳುಹಿಸಿದ್ದು ಅವರೇ ಪ್ರತಿಭಟನೆಗೆ ನಮ್ಮೊಂದಿಗೆ ಸೇರದೆ ಇದ್ದಾಗ ಅವರ ವಿರುದ್ಧವೇ ಪ್ರತಿಭಟಿಸಬೇಕಾದ ಅನಿವಾರ್ಯತೆ ಇದೆ ಎಂದರು. ಸಭೆಯಲ್ಲಿ ನೆರೆದ ಎಲ್ಲರ ಅಭಿಪ್ರಾಯಗಳನ್ನು ಕ್ರೂಡೀಕರಿಸಿ ಫೆಬ್ರವರಿ 22 ರಂದು ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬಂದ್ ನಡೆಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಯಿತು.
ಈ ವೇಳೆ ಜಾಗೃತಿ ಸಮಿತಿಯ ಪ್ರತಾಪ್ ಶೆಟ್ಟಿ, ವಿಠಲ್ ಪೂಜಾರಿ, ಆಲ್ವಿನ್ ಅಂದ್ರಾದೆ, ಕಾರ್ಕಡ ರಾಜು ಪೂಜಾರಿ, ವಿನಯ್ ಕಬ್ಯಾಡಿ, ಪ್ರಶಾಂತ್ ಶೆಟ್ಟಿ, ರಾಜೇಶ್ ಹಾಗೂ ಇತರರು ಉಪಸ್ಥಿತರಿದ್ದರು.