ರಾಮ ಮಂದಿರಕ್ಕೆ ದೇಣಿಗೆ ನೀಡದವರ ಮನೆ ಗುರುತಿಗೆ ಸೂಚಿಸಿಲ್ಲ: ಪೇಜಾವರ ಶ್ರೀ
ಉಡುಪಿ : ರಾಮಮಂದಿರಕ್ಕೆ ಹಣ ಕೊಡದವರ ಮನೆ ಗುರುತು ಮಾಡುತ್ತಿರುವುದು ತಿಳಿಯಿತು. ಯಾತಕ್ಕೆ ಹೀಗೆ ಮಾಡುತ್ತಿದ್ದಾರೆಂಬುದು ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆರೋಪಕ್ಕೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದ್ದು, ”ರಾಮ ಮಂದಿರಕ್ಕೆ ದೇಣಿಗೆ ನೀಡದವರ ಮನೆ ಗುರುತಿಗೆ ಸೂಚಿಸಿಲ್ಲ” ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಕ್ಕೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ”ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡದವರ ಮಾಹಿತಿ ಸಂಗ್ರಹಿಸಿ ಇರಿಸುವಂತೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಗಲಿ ಅಥವಾ ಆರ್ಎಸ್ಎಸ್ ಆಗಲಿ ಯಾವುದೇ ಸೂಚನೆ ನೀಡಿಲ್ಲ. ದೇಣಿಗೆ ಕೊಟ್ಟವರ ಮಾಹಿತಿ ಮಾತ್ರ ಟ್ರಸ್ಟ್ಗೆ ಅಗತ್ಯವಾದುದು, ಆದ್ದರಿಂದ ಸಂಗ್ರಹಿಸುತ್ತಾರೆ” ಎಂದು ಸ್ಪಷ್ಟಪಡಿಸಿದರು.ಇನ್ನು, ”ರಾಮ ಮಂದಿರ ನಿರ್ಮಾಣಕ್ಕಾಗಿ ನಿರೀಕ್ಷೆಗೂ ಅಧಿಕ ದೇಣಿಗೆ ಸಂಗ್ರಹವಾಗುತ್ತಿದೆ. ಅದರಿಂದಾಗಿ ಈಗ ದೇಣಿಗೆ ಸ್ವೀಕಾರ ರಶೀದಿ ಹಾಗೂ ಕೂಪನ್ಗಳ ಕೊರತೆ ಎದುರಾಗಿದೆ. ಹಾಗಾಗಿ ಮುಂದೆ ದೇಣಿಗೆ ಪಡೆಯಲು ಅನುಕೂಲವಾಗಲಿ ಎಂದು ಮನೆಗಳಿಗೆ ಗುರುತು ಹಾಕಿರಬಹುದು. ಹಾಗೆ ಮಾಡಿದ್ದರೆ. ಅದರು ತಪ್ಪೇನಲ್ಲ” ಎಂದು ಸಮರ್ಥಿಸಿಕೊಂಡರು.”ಹೆಚ್ ಡಿ ಕುಮಾರಸ್ವಾಮಿ ಅವರು ಮಾಡಿರುವುದು ಗಂಭೀರ ಆರೋಪ. ಅದಕ್ಕೆ ಬೇಕಾದ ಸಾಕ್ಷ್ಯ ಅವರು ನೀಡಿ ಆರೋಪ ಮಾಡಬೇಕು ಎಂದು ಹೇಳಿದರು.