ಶೇ.20ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಖಾಸಗಿ ಬಸ್ಸು ಮಾಲಕರ ಒಕ್ಕೂಟ ಆಗ್ರಹ
ಉಡುಪಿ: ಸರಕಾರಿ ಹಾಗೂ ಖಾಸಗಿ ಬಸ್ಸುಗಳ ದರ ಪರಿಷ್ಕರಣೆ ಏಕ ಕಾಲದಲ್ಲಿ ಮಾಡುವಂತೆ ರಾಜ್ಯ ಸರಕಾರಕ್ಕೆ ಕರ್ನಾಟಕ ರಾಜ್ಯ ಬಸ್ಸು ಮಾಲಕರ ಒಕ್ಕೂಟ ಆಗ್ರಹಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ಬಸ್ಸು ಮಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸದಾನಂದ ಚಾತ್ರ ಅವರು, ಡಿಸಿಲ್ ದರ ನಿರಂತರ ಹೆಚ್ಚುತ್ತಿದ್ದು ಸುಮಾರು 23 ರೂಪಾಯಿ ಲೀಟರೊಂದಕ್ಕೆ ಹೆಚ್ಚಾಗಿದೆ. ರಾಜ್ಯದ ಸರಕಾರಿ ಸ್ವಾಮ್ಯದ ಸಂಸ್ಥೆಗಳಾದ ಬಿಎಂಟಿಸಿ , ಕೆಎಸ್ ಆರ್ ಟಿಸಿ, ಎನ್ ಡಬ್ಲೂಕೆಆರ್ ಟಿಸಿ, ಎನ್ ಇಕೆಆರ್ ಟಿಸಿ, ಸಂಸ್ಥೆಗಳ ಶೇ. 20ರಷ್ಟು ದರ ಹೆಚ್ಚಳ ಮಾಡಬೇಕೆಂದು ಮನವಿಯನ್ನು ಸಲ್ಲಿಸಿವೆ. ಈ ಕುರಿತಾಗಿ ರಾಜ್ಯ ಬಸ್ ಮಾಲಕರ ಒಕ್ಕೂಟವು ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಸಾರಿಗೆ ಸಚಿವರ ಮತ್ತು ಅಧಿಕಾರಿಗಳ ಸಭೆಯಲ್ಲಿ ಸಲ್ಲಿಸಿದ ರಾಜ್ಯದ ಏಕ ರೂಪ ದರ ಪರಿಷ್ಕರಣೆ ಆಗಬೇಕೆಂಬ ಬೇಡಿಕೆಗೆ ರಾಜ್ಯದ ಸಾರಿಗೆ ಸಚಿವರು ಪೂರಕವಾಗಿ ಸ್ಪಂದಿಸಿದ್ದಾರೆ. ಅದರಂತೆ ಸರಕಾರಿ ಒಡೆತನದ ಸಾರಿಗೆ ನಿಗಮಗಳಿಗೆ ದರ ಹೆಚ್ಚು ಮಾಡುವ ಅವಧಿಯಲ್ಲಿ ರಾಜ್ಯದ ಖಾಸಗಿ ಸಾರಿಗೆ ಸಂಸ್ಥೆಗಳಿಗೂ ಒಂದೇ ಕಾಲದಲ್ಲಿ ದರ ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.