ಕಡೆಕಾರು ಪಂ. ನೂತನ ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷ ನವೀನ್ ಶೆಟ್ಟಿ ಅವಿರೋಧ ಆಯ್ಕೆ

ಉಡುಪಿ: ಕಡೆಕಾರ್ ಪಂಚಾಯತ್‌ಗೆ ನೂತನ ಅವಿರೋಧ ಆಯ್ಕೆಯಾದ ಅಧ್ಯಕ್ಷರು ಸರಸ್ವತಿ ಹಾಗೂ ಉಪಾಧ್ಯಕ್ಷರು ನವೀನ್ ಶೆಟ್ಟಿಯವರಿಗೆ ಪಂಚಾಯತ್ ಸಭಾಂಗಣದಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಜಿ.ಪಂ. ಸದಸ್ಯರಾದ ಕಾಂಗ್ರೆಸ್‌ನ ಹಿರಿಯ ಮುಖಂಡರು ದಿವಾಕರ ಕುಂದರ್‌ರವರು ಮಾತನಾಡುತ್ತಾ ಪಂಚಾಯತ್‌ನ ಎಲ್ಲಾ 21 ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಮೂಲಕ ಜನರ ವಿಶ್ವಾಸವನ್ನು ಉಳಿಸುವಂತೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಹಿತವಚನ ನುಡಿದರು.

ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕೆರೆಯವರು, ಜನಪರ ಆಡಳಿತ ನೀಡುವ ಮೂಲಕ ಪಕ್ಷವನ್ನು ಬಲಪಡಿಸುವಂತೆ ಕರೆ ನೀಡಿದರು. ಮಾಜಿ ಜಿ.ಪಂ. ಸದಸ್ಯರು ಹಿರಿಯರಾದ ವಾಮನ ಬಂಗೇರ ಮಾತನಾಡಿದರು. ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಅಭಿನಂದನೆಗೆ ಉತ್ತರಿಸುತ್ತಾ ಪಂಚಾಯತ್‌ನ ಅಭಿವೃದ್ಧಿ ಕಾರ್ಯಗಳಿಗೆ ಸದಸ್ಯರೆಲ್ಲರ ಅಭಿಪ್ರಾಯ ಪಡೆದು ದೇವರು ಕೊಟ್ಟ ಅವಕಾಶವನ್ನು ಸದುಪಯೋಗಪಡಿಸಿ ಮಾದರಿ ಆಡಳಿತ ನೀಡುವುದಾಗಿ ಪ್ರತಿಕ್ರಿಯಿಸಿದರು.

ಈ ಸಂದರ್ಭದಲ್ಲಿ ಸದಾಶಿವ ಅಮೀನ್ ಕಟ್ಟೆಗುಡ್ಡೆ, ಜತಿನ್ ಕಡೆಕಾರ್, ಸತೀಶ್ ಕೋಟ್ಯಾನ್, ತಾರಾನಾಥ್ ಸುವರ್ಣ ಹಾಗೂ ಚುನಾಯಿತ ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರು ಉಪಸ್ಥಿತರಿದ್ದರು. ಸದಸ್ಯರ ಪರವಾಗಿ ಇಂದಿರಾ ಶೆಟ್ಟಿಯವರು ಮಾತನಾಡುತ್ತಾ ಜನರ ಸೇವೆಗೆ ಮುಡಿಪಾಗಿರುವ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದರು. ಕಾರ್ಯಕ್ರಮವನ್ನು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!