ಮಂಗಳೂರು: ಹಿರಿಯ ನೈರ್ಮಲ್ಯ ಅಧಿಕಾರಿಗೆ ಒಂದು ಕೋಟಿ ದಂಡ, 4 ವರ್ಷ ಜೈಲು ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

ಮಂಗಳೂರು ಅ.14 (ಉಡುಪಿ ಟೈಮ್ಸ್ ವರದಿ): ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿಯನ್ನು ಹೊಂದಿದ್ದ ಪ್ರಕರಣದ ಆರೋಪಿ ಮಂಗಳೂರು ಮಹಾನಗರಪಾಲಿಕೆಯ ಹಿರಿಯ ನೈರ್ಮಲ್ಯ ನಿರೀಕ್ಷಕ ಶಿವಲಿಂಗ ಕೊಂಡಗುಳಿಗೆ 4 ವರ್ಷ ಜೈಲು ಶಿಕ್ಷೆ ಹಾಗೂ 1 ಕೋಟಿ ರೂ ದಂಡ ವಿಧಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಮಂಗಳೂರು ಮಹಾನಗರ ಪಾಲಿಕೆಯ ಹಿರಿಯ ನೈರ್ಮಲ್ಯ ನಿರೀಕ್ಷಕ ಶಿವಲಿಂಗ ಕೊಂಡಗುಳಿಗೆ ವಿರುದ್ಧ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿಯನ್ನು ಹೊಂದಿದ್ದ ಆರೋಪದ ಮೇಲೆ 2013 ರ ಫೆ 15 ರಂದು ಮಂಗಳೂರು ಕರ್ನಾಟಕ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.

ಈ ಪ್ರಕರಣದ ವಿಚಾರಣೆಯನ್ನು ನಡೆಸಿದ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಬಿ. ಜಕಾತಿ ಇವರು ಇಂದು ಅಂತಿಮ ತೀರ್ಪು ನೀಡಿದ್ದಾರೆ. ಪ್ರಕರಣದ ಆರೋಪಿಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಶಿವಲಿಂಗ ಕೊಂಡಗುಳಿಗೆ 4 ವರ್ಷಗಳ ಕಾಲ ಸಾದಾ ಸಜೆ ಹಾಗೂ ರೂ 1,00,00,000 ರೂ. ದಂಡ ವಿಧಿಸಿದೆ ಹಾಗೂ ಆರೋಪಿಯು ದಂಡ ಕಟ್ಟಲು ವಿಫಲನಾದಲ್ಲಿ ಮತ್ತೆ 1 ವರ್ಷ ಸಾದಾ ಸಜೆಗೆ ಆದೇಶಿಸಿ ಅಂತಿಮ ತೀರ್ಪು ಹೊರಡಿಸಿದೆ.

ಈ ಪ್ರಕರಣದಲ್ಲಿ ಕರ್ನಾಟಕ ಲೋಕಾಯುಕ್ತದ ಪೊಲೀಸ್ ಉಪಾಧೀಕ್ಷಕ ಉಮೇಶ್ ಜಿ ಶೇಟ್ ಅವರು ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ವಿಚಾರಣೆ ವೇಳೆ ವಿಶೇಷ ಸಾರ್ವಜನಿಕ ಅಭಿಯೋಜಕರಾದ ಮಂಗಳೂರು ಕರ್ನಾಟಕದ ಲೋಕಾಯುಕ್ತದ ರವೀಂದ್ರ ಮುನ್ನಿಪಾಡಿ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದರು.

Leave a Reply

Your email address will not be published. Required fields are marked *

error: Content is protected !!