ನಿಯಮ ಉಲ್ಲಂಘಿಸಿದ ಗೂಗಲ್: 1.1 ಮಿಲಿಯನ್ ಯುರೋ ದಂಡ
ಈಗಾಗಲೇ ಹಲವು ಬಾರಿ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಭಾರೀ ಮೊತ್ತದ ದಂಡ ಪಾವತಿಸಿರುವ ಮಾಹಿತಿ ತಂತ್ರಜ್ಞಾನದ ದೈತ್ಯ ಸರ್ಚ್ ಇಂಜಿನ್ ಗೂಗಲ್ ಸಂಸ್ಥೆಗೆ ಮತ್ತೆ ಭಾರಿ ಮೊತ್ತದ ದಂಡ ವಿಧಿಸಲಾಗಿದೆ. ಈ ಬಗ್ಗೆ ಅಂತರಾಷ್ಟ್ರೀಯ ಸುದ್ಧಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದ್ದು, ಹೋಟೆಲ್ ರ್ಯಾಂಕಿಂಗ್ ಬಗ್ಗೆ ತನ್ನ ಗ್ರಾಹಕರಿಗೆ ಗೂಗಲ್ ತಪ್ಪು ಮಾಹಿತಿ ನೀಡಿರುವುದು ತನಿಖೆಯಲ್ಲಿ ಸಾಬೀತಾದ ಹಿನ್ನೆಲೆ ಬರೋಬ್ಬರಿ 1.1 ಮಿಲಿಯನ್ ಯುರೋ (1.34 ಮಿಲಿಯನ್ ಡಾಲರ್) ದಂಡ ವಿಧಿಸಲಾಗಿದೆ. ಹೋಟೆಲ್ ರ್ಯಾಂಕಿಂಗ್ ನೀಡುವ ವಿಚಾರದಲ್ಲಿ ಗೂಗಲ್ ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿತ್ತು. ಈ ಬಗ್ಗೆ ಅಮೆರಿಕ ಮೂಲದ ಅತಿದೊಡ್ಡ ಸರ್ಚ್ ಇಂಜಿನ್ ಗೂಗಲ್ ತನ್ನ ಗ್ರಾಹಕರಿಗೆ ತಪ್ಪು ಮಾಹಿತಿ ನೀಡುತ್ತಿದೆ ಎಂದು ಆರೋಪಿಸಲಾಗಿತ್ತು. ಫ್ರಾನ್ಸ್ ಮತ್ತು ಐಲೆರ್ಂಡ್ ಈ ಬಗ್ಗೆ ತನಿಖೆ ಕೈಗೊಂಡಿದ್ದವು. ಗೂಗಲ್ ತಪ್ಪು ಎಸಗಿರುವುದು ಸಾಬೀತಾದ ಹಿನ್ನೆಲೆ ದೊಡ್ಡ ಮೊತ್ತದ ದಂಡವನ್ನು ವಿಧಿಸಲಾಗಿದೆ. ಗೂಗಲ್ 2019ರಿಂದ ಹೋಟೆಲ್ ಗಳಿಗೆ ನೀಡುವ ಶ್ರೇಯಾಂಕವನ್ನು ತಿದ್ದುಪಡಿ ಮಾಡಿದೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ. ತಾನು ಮಾಡಿರುವ ತಪ್ಪಿಗೆ ವಿಧಿಸಿರುವ ದಂಡದ ಮೊತ್ತವನ್ನು ಪಾವತಿಸುವುದಾಗಿ ಗೂಗಲ್ ಐಲೆರ್ಂಡ್ ಮತ್ತು ಗೂಗಲ್ ಫ್ರಾನ್ಸ್ ಒಪ್ಪಿಕೊಂಡಿವೆ ಎಂದು ಫ್ರಾನ್ಸ್ ನ ಹಣಕಾಸು ಸಚಿವಾಲಯ ಮತ್ತು ಫ್ರಾಡ್ ವಾಚ್ಡಾಗ್ ಫೆ.15 ರಂದು ತಿಳಿಸಿವೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. |