ಮೀನಿನ ಲಾರಿಯಲ್ಲಿ ಅಕ್ರಮ ಮದ್ಯ ಸಾಗಾಟ – 25 ಲಕ್ಷ ಮೌಲ್ಯದ ಸ್ವತ್ತು ವಶ
ಕಾರವಾರ: ಮೀನಿನ ಲಾರಿಯಲ್ಲಿ ಅಪಾರ ಪ್ರಮಾಣದ ಅಕ್ರಮ ಮದ್ಯ ಸಾಗಿಸುತ್ತಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಕಾರವಾರದ ಮಾಜಾಳಿ ಗೇಟ್ ಬಳಿ ನಡೆದಿದೆ. ಪೊಲೀಸರು ವಶಕ್ಕೆ ಪಡೆದ ಲಾರಿ ಚಾಲಕನನ್ನು ಆಂಧ್ರಪ್ರದೇಶ ಮೂಲದ ಸೂರ್ಯನಾರಾಯಣ ಮೂರ್ತಿ ಎಂದು ಗುರುತಿಸಲಾಗಿದೆ.
ಗೋವಾದಿಂದ ಆಗಮಿಸಿದ ಮೀನಿನ ಲಾರಿಯಲ್ಲಿ 300 ಕ್ಕೂ ಹೆಚ್ಚು ಖಾಲಿ ಟ್ರೇ ಗಳು ಇರುವುದನ್ನು ಕಂಡು ಅನುಮಾನಗೊಂಡ ಅಬಕಾರಿ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದುದು ಪತ್ತೆಯಾಗಿದೆ. ಸುಮಾರು 9.13 ಲಕ್ಷ ಮೌಲ್ಯದ 505 ಲೀಟರ್ ಗೋವಾ ಮದ್ಯ, ಸಾಗಾಟಕ್ಕೆ ಬಳಸಿದ್ದ ಕಂಟೇನರ್ ಲಾರಿ, 90 ಸಾವಿರ ಮೌಲ್ಯದ ಪ್ಲಾಸ್ಟಿಕ್ ಟ್ರೇ ಸೇರಿ 25 ಲಕ್ಷ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.