ಜನರ ಸುಲಿಗೆ ಮಾಡುತ್ತಿರುವ ಸರಕಾರ: ಭಾಸ್ಕರ್ ರಾವ್
ಉಡುಪಿ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಬ್ಯಾರೆಲ್ಗೆ 50 ಡಾಲರ್ ಇದ್ದರೂ ಕೇಂದ್ರ ಸರಕಾರ ಅತೀ ಹೆಚ್ಚು ತೆರಿಗೆಗಳನ್ನು ಹೇರುವ ಮೂಲಕ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ವಿಪರೀತವಾಗಿ ಏರಿಸಿದೆ. ಆದರೆ ಈ ಹಿಂದೆ ಮನಮೋಹನ್ ಸಿಂಗ್ ಸರಕಾರದ ಅವಧಿಯಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರೆಲ್ಗೆ 127 ಡಾಲರ್ ಇದ್ದರೂ ಜನಸಾಮಾನ್ಯರ ಹಿತದೃಷ್ಟಿಯಿಂದ ತೆರಿಗೆಯನ್ನು ಕಡಿತಗೊಳಿಸಿ ಪ್ರಸ್ತುತ ಇರುವ ದರಕ್ಕಿಂತ ಕಡಿಮೆ ಬೆಲೆಗೆ ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆ ಮಾಡಿತ್ತು.
ಆದರೂ ಅದನ್ನು ನೆಪವಾಗಿರಿಸಿಕೊಂಡು ಆಗ ವಿರೋಧ ಪಕ್ಷವಾಗಿದ್ದ ಬಿಜೆಪಿ ಬೀದಿಗಿಳಿದು ಪ್ರತಿಭಟಿಸುವುದು ಸಾಮಾನ್ಯವಾಗಿತ್ತು. ಬಿಜೆಪಿಗೆ ಬೆಲೆ ಏರಿಕೆ ಬಗ್ಗೆ ಆಗ ಇದ್ದ ಕಾಳಜಿ ಈಗ ಏಕೆ ಕಾಣಿಸುತ್ತಿಲ್ಲ. ದಿನಂಪ್ರತಿ ಬೆಲೆ ಏರಿಕೆಗೊಂಡರೂ ಬಿಜೆಪಿ ನಾಯಕರು ತಮಗೆ ಸಂಬಂಧವಿಲ್ಲದಂತೆ ನಟಿಸುತ್ತಿರುವುದು ವಿಪರ್ಯಾಸ. 2014ರಲ್ಲಿ ಪೆಟ್ರೋಲಿಗೆ ಇದ್ದ ಅಬಕಾರಿ ಸುಂಕ ರೂ. 9.45 ಆದರೆ ಈಗ ರೂ.32.95 ಅಬಕಾರಿ ಸುಂಕವನ್ನು ಸರಕಾರ ಹೇರಿದೆ. ಹಾಗೆಯೇ ಡೀಸೆಲ್ಗೆ ರೂ. 31.20 ಹೇರಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಪ್ರಥಮ ಬಾರಿಗೆ ಡಿಸೆಲ್ ಬೆಲೆಯನ್ನು ಪೆಟ್ರೋಲ್ ಬೆಲೆಗೆ ಸಮನಾಗಿ ಮಾರುಕಟ್ಟೆಗೆ ಬರುವಂತೆ ಮಾಡಿದೆ.
ಇದರಿಂದ ಸರಕು ಸಾಗಣೆಯ ಮೇಲೆ ಪರಿಣಾಮ ಬೀರಿ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿದೆ. ಬಿಜೆಪಿ ಆಡಳಿತದಲ್ಲಿ ಸಾಮಾನ್ಯ ಜನರು ವಿಕಾಸವಾಗದೆ ವಿನಾಶದತ್ತ ಸಾಗುತ್ತಿದ್ದಾರೆ. ಅನಿಯಂತ್ರಿತವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಕೇಂದ್ರ ಹಾಗೂ ರಾಜ್ಯದ ಘೋರ ವೈಫಲ್ಯವನ್ನು ಬಿಂಬಿಸುತ್ತದೆ. ಈಗಾಗಲೇ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಲೀಟರಿಗೆ ರೂ 95.21 ಮತ್ತು ರೂ. 86.04 ಗಡಿ ದಾಟಿದ್ದು ಶೀಘ್ರದಲ್ಲಿಯೇ 100ಕ್ಕೆ ಜಿಗಿಯುವ ಆತಂಕ ಮೂಡಿದೆ.
ರಾಜ್ಯ ಹಾಗೂ ಕೇಂದ್ರ ಸರಕಾರಗಳು ಸೆಸ್ ಕಡಿತಗೊಳಿಸುವ ಮೂಲಕ ಜನರ ಮೇಲಿನ ಹೊರೆಯನ್ನು ಕಡಿತಗೊಳಿಸಬಹುದು. ಆದರೆ ಕೇಂದ್ರ ಸರಕಾರ ಜನರನ್ನು ಎಲ್ಲಾ ರೀತಿಯಿಂದಲೂ ಸುಲಿಯುವ ಕಾಯಕದಲ್ಲಿ ತೊಡಗಿಸಿಕೊಂಡಿದೆ. ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ : ಪೆಟ್ರೋಲ್ ದರ ಏರಿಕೆಯಿಂದ ಸಾಮಾನ್ಯ ಜನರು ತತ್ತರಿಸಿ ಹೋಗಿರುವಾಗಲೇ ಕಳೆದ ಜನವರಿ ತಿಂಗಳಲ್ಲಿಯೇ ಪ್ರತೀ ಸಿಲಿಂಡರಿಗೆ 100 ರೂಪಾಯಿ ಹೆಚ್ಚಳಗೊಳಿಸಿದ್ದ ಕೇಂದ್ರ ಸರಕಾರವು ಪ್ರಸ್ತುತ ಪ್ರತೀ ಸಿಲಿಂಡರ್ ಬೆಲೆಯನ್ನು 50 ರೂಪಾಯಿಗೆ ಹೆಚ್ಚಳಗೊಳಿಸಿದೆ. 14.2ಕೆ.ಜಿ. ಗ್ಯಾಸ್ ಸಿಲಿಂಡರ್ ಬೆಲೆಯು 719ರೂಪಾಯಿಂದ 796 ರೂಪಾಯಿಗೆ ಏರಿಕೆಗೊಂಡಿದೆ.
ಕೇಂದ್ರ ಸರಕಾರವು ಗ್ರಾಹಕರಿಗೆ ಸಬ್ಸಿಡಿ ಹಣದ ನೇರ ವರ್ಗಾವಣೆಯನ್ನು ಸ್ಥಗಿತಗೊಳಿಸಿದ ಹಿನ್ನಲೆಯಲ್ಲಿ ಗ್ರಾಹಕರಿಗೆ ಹೆಚ್ಚಿನ ಹೊರೆ ಬಿದ್ದಂತಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರ ಇರುವುದು ಜನರ ಅನುಕೂಲಕ್ಕಾಗಿಯೇ ಹೊರತು ಜನರ ಸುಲಿಗೆ ಮಾಡಲು ಅಲ್ಲ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.