ನಾಳೆ ತೋನ್ಸೆ ಗ್ರಾ.ಪಂ ನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ
ಕೆಮ್ಮಣ್ಣು: ತೋನ್ಸೆ ಗ್ರಾ ಪಂ ನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ನಾಳೆ (ಫೆ.16) ದಿನ ನಿಗದಿಯಾಗಿದೆ. ಅಧ್ಯಕ್ಷ ಹುದ್ದೆ ಪರಿಶಿಷ್ಟ ಪಂಗಡ ಮಹಿಳೆ ಮತ್ತು ಉಪಾಧ್ಯಕ್ಷ ಹುದ್ದೆ ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿದೆ. ಆಯ್ಕೆಯ ಸಂಬಂಧ ನಿಗದಿತ ಅಧಿಕಾರಿಯಾಗಿ ಜಗದೀಶ ಭಟ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಉಪವಿಭಾಗ , ಉಡುಪಿ ಇವರನ್ನು ನಿಗದಿಪಡಿಸಲಾಗಿದೆ.
ಗ್ರಾ ಪಂ ನಲ್ಲಿ ಪರಿಶಿಷ್ಟ ಪಂಗಡದ ಏಕೈಕ ಮಹಿಳೆಯಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಲತಾ ಅವರು ಅಧ್ಯಕ್ಷರಾಗಿಯೂ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಗ್ರಾ ಪಂ ನಲ್ಲಿ ಪಕ್ಷಗಳ ಬಲಾಬಲದಂತೆ ಕಾಂಗ್ರೆಸ್ ಬೆಂಬಲಿಗರು 9, ಬಿಜೆಪಿ ಬೆಂಬಲಿಗರು 6, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಬೆಂಬಲಿಗರು 5 ಮತ್ತು ಎಸ್ ಡಿಪಿಐ ನ ಒಬ್ಬರು ಇದ್ದು, ಉಪಾಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ಮೀಸಲಾಗಿರುವ ಹಿನ್ನಲೆಯಲ್ಲಿ ಕುತೂಹಲ ಮೂಡಿದೆ.
ಕಾಂಗ್ರೆಸ್ ನಿಂದ ಹಿಂದೊಮ್ಮೆ ಅಧ್ಯಕ್ಷರಾಗಿದ್ದ ನಿತ್ಯಾನಂದ ಕೆಮ್ಮಣ್ಣು ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದು, ಅವರಿಗೆ ವೆಲ್ಫೇರ್ ಪಾರ್ಟಿ ಬೆಂಬಲ ನೀಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.ಸಂಖ್ಯಾ ಬಲ ಹೊಂದಿರದ ಬಿಜೆಪಿಯವರೂ ವೆಲ್ಫೇರ್ ಪಾರ್ಟಿ ಗೆ ಬೆಂಬಲ ನೀಡಿ ಅವರನ್ನು ಉಪಾಧ್ಯಕ್ಷ ಹುದ್ದೆಗೆ ಆಯ್ಕೆ ಮಾಡುವ ಸಂಬಂಧ ಮಾತುಕತೆಗಳು ನಡೆದಿದ್ದರೂ ಫಲಪ್ರದವಾಗಿಲ್ಲಾ ಎನ್ನಲಾಗುತ್ತಿದೆ. ಆ ಹಿನ್ನಲೆಯಲ್ಲಿ ಗ್ರಾ ಪಂ ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ. ನಿಖರ ಫಲಿತಾಂಶ ನಾಳೆ ಸಂಜೆಯೇ ತಿಳಿದು ಬರಲಿದೆ.