ಉದ್ಯಾವರ ಗ್ರಾಪಂ: ಅಧ್ಯಕ್ಷ ಬಿಜೆಪಿ ತೆಕ್ಕೆಗೆ, ಉಪಾಧ್ಯಕ್ಷ ಕಾಂಗ್ರೆಸ್ ಮಡಿಲಿಗೆ

ಉಡುಪಿ: ಜಿಲ್ಲೆಯ ಹಿರಿಯ ಗ್ರಾಮ ಪಂಚಾಯತ್ ಗಳಲ್ಲಿ ಒಂದಾಗಿರುವ ಉದ್ಯಾವರ ಗ್ರಾಮ ಪಂಚಾಯತ್ ನಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಅಧ್ಯಕ್ಷರಾಗಿ ಹಿರಿಯ ಸದಸ್ಯ ರಾಧಾಕೃಷ್ಣ ಶ್ರೀಯಾನ್ ಬೊಳ್ಜೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬಹುಮತವಿದ್ದರೂ ಮೀಸಲಾತಿಯಿಂದಾಗಿ ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿ ಕಳೆದುಕೊಂಡಿದ್ದು, ಕಾಂಗ್ರೆಸ್ ಬೆಂಬಲಿತ ಮಧುಲತಾ ಶಶಿಧರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 

ತೀವ್ರ ಪೈಪೋಟಿ ಯಲ್ಲಿದ್ದ ಉದ್ಯಾವರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ , 30 ಸ್ಥಾನಗಳಲ್ಲಿ ಬಿಜೆಪಿ 15, ಕಾಂಗ್ರೆಸ್ 13 ಮತ್ತು ಪಕ್ಷೇತರರು ಇಬ್ಬರು ಜಯಗಳಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಎರಡೂ ಪಕ್ಷಗಳಲ್ಲಿ ತೀವ್ರ ಪೈಪೋಟಿ ಇದ್ದು, ಕೊನೆಯ ಕ್ಷಣದಲ್ಲಿ ಬಿಜೆಪಿ ಕ್ಷೇತ್ರ ಅಧ್ಯಕ್ಷ ಶ್ರೀಕಾಂತ್ ನಾಯಕ್ ಮತ್ತು ಕಾಪು ಶಾಸಕ ಲಾಲಾಜಿ ಮೆಂಡನ್ ಉಪಸ್ಥಿತಿಯಲ್ಲಿ ಇಬ್ಬರು ಪಕ್ಷೇತರರು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡು, ಬಿಜೆಪಿಗೆ ಬೆಂಬಲವನ್ನು ಸೂಚಿಸಿದರು. 

ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ರಾಧಾಕೃಷ್ಣ ಬೊಳ್ಜೆ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮಿತೇಶ್ ಸುವರ್ಣ ನಾಮಪತ್ರ ಸಲ್ಲಿಸಿದ್ದರು. ಮಧ್ಯಾಹ್ನದ ಬಳಿಕ ನಡೆದ ಮತದಾನದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ರಾಧಕೃಷ್ಣ ಶ್ರೀಯಾನ್ 17 ಮತಗಳನ್ನು ಪಡೆದರೆ, ಕಾಂಗ್ರೆಸ್ ಬೆಂಬಲಿತ ಮಿತೇಶ್ ಸುವರ್ಣ 13 ಮತಕ್ಕೆ ತೃಪ್ತಿಪಡಬೇಕಾಯಿತು.

Leave a Reply

Your email address will not be published. Required fields are marked *

error: Content is protected !!