ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದವರು 15 ದಿನಗಳಲ್ಲಿ ಹಿಂದಿರುಗಿಸಿ: ಕತ್ತಿ ಎಚ್ಚರಿಕೆ
ಬೆಳಗಾವಿ: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ತತ್ತರಿಸಿ ಹೋಗಿರುವ ಬಣ ಮತ್ತು ಕೆಳ ಮಧ್ಯಮ ವರ್ಗದವರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದ್ದು, ಮನೆಯಲ್ಲಿ ಟಿವಿ, ಬೈಕ್, ಫ್ರಿಡ್ಜ್ ಇದ್ದರೆ ಅವರ ಬಿಪಿಎಲ್ ಪಡಿತರ ಚೀಟಿಯನ್ನು ರದ್ದುಗೊಳಿಸ ಲಾಗುವುದು ಎಂದು ಹೇಳಿದೆ.
ಈ ಕುರಿತಂತೆ ಬೆಳಗಾವಿಯಲ್ಲಿ ಮಾತನಾಡಿದ ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಅವರು, ‘ಐದು ಎಕರೆಗಿಂತ ಹೆಚ್ಚು ಜಮೀನು ಹೊಂದಿರುವವರು, ಮನೆಯಲ್ಲಿ ಬೈಕ್, ಟೆಲಿವಿಷನ್, ಫ್ರಿಡ್ಜ್ ಹೊಂದಿದ್ದವರ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗುವುದು. ಇಂತಹ ಬಿಪಿಎಲ್ ಕಾರ್ಡುದಾರರು ತಮ್ಮ ಕಾರ್ಡ್ಗಳನ್ನು ಹಿಂದಿರುಗಿಸಲು ಮಾರ್ಚ್ ಅಂತ್ಯದವರೆಗೂ ಸಮಯ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಅಲ್ಲದೆ ಸರ್ಕಾರಿ, ಅರೆ ಸರ್ಕಾರಿ ಅಧಿಕಾರಿಗಳು ಮತ್ತು ವರ್ಷಕ್ಕೆ 1.20 ಲಕ್ಷ ರೂಗಿಂತ ಅಧಿಕ ವರಮಾನ ಹೊಂದಿರುವವರು ಸಹ ಬಿಪಿಎಲ್ ಕಾರ್ಡ್ ಹೊಂದಿರುವಂತಿಲ್ಲ. ಅವುಗಳನ್ನು ಮಾರ್ಚ್ 31ರ ಒಳಗೆ ವಾಪಸ್ ನೀಡಬೇಕು. ಇಲ್ಲದಿದ್ದರೆ ಸರ್ಕಾರವೇ ಸಮೀಕ್ಷೆ ನಡೆಸಿ ಕಾರ್ಡುಗಳನ್ನು ಹಿಂಪಡೆಯುತ್ತದೆ. ಏಪ್ರಿಲ್ ಬಳಿಕ ಸರ್ಕಾರ ಬಿಪಿಎಲ್ ಕಾರ್ಡುದಾರರ ಪರಿಶೀಲನೆ ನಡೆಸಲಿದೆ. ಒಂದು ವೇಳೆ ಈ ಎಲ್ಲ ಸೌಲಭ್ಯಗಳು ಇದ್ದರೂ ಬಿಪಿಎಲ್ ಕಾರ್ಡು ಹೊಂದಿದ್ದರೆ ಅಂತಹವರಿಗೆ ದಂಡದ ಜತೆಗೆ ಶಿಕ್ಷೆ ಸಹ ನೀಡಲಾಗುತ್ತದೆ ಎಂದು ಉಮೇಶ್ ಕತ್ತಿ ಎಚ್ಚರಿಕೆ ನೀಡಿದ್ದಾರೆ.
ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದವರು 15 ದಿನಗಳ ಒಳಗೆ ಅದನ್ನು ಹಿಂದಿರುಗಿಸಬೇಕು. ನಿಗದಿತ ಸಮಯದಲ್ಲಿ ಕಾರ್ಡ್ಗಳನ್ನು ವಾಪಸ್ ನೀಡದವರನ್ನು ಆಧಾರ್ ದೃಢೀಕರಣದ ಮೂಲಕ ಪತ್ತೆ ಮಾಡಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಉಪನಿರ್ದೇಶಕರಿಗೆ ಉಮೇಶ್ ಕತ್ತಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬದವರಿಗೆ ಆಹಾರ ಧಾನ್ಯಗಳನ್ನು ಒದಗಿಸಲು ಬಿಪಿಎಲ್ ಪಡಿತರ ಚೀಟಿಗಳನ್ನು ನೀಡಲಾಗುತ್ತದೆ. ಆದರೆ ಆರ್ಥಿಕವಾಗಿ ಸದೃಢರಾಗಿರುವ ಕುಟುಂಬದವರು ಕೂಡ ಸುಳ್ಳು ಮಾಹಿತಿ ಸಲ್ಲಿಸಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ. ಅಂತಹವರಿಗೆ ಕಾರ್ಡ್ ವಾಪಸ್ ನೀಡಲು ಅವಕಾಶ ಕೊಡಲಾಗಿತ್ತು. ಶೇ 55-60ರಷ್ಟು ಮಂದಿ ಮಾತ್ರ ಕಾರ್ಡ್ ಹಿಂದಿರುಗಿಸಿದ್ದಾರೆ. ಈಗ ಉಳಿದವರಿಗೆ ಕಡೆಯ ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಅಕ್ಕಿ ಜತೆ ರಾಗಿ ಮತ್ತು ಜೋಳ
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿನ ಬಿಪಿಎಲ್ ಕಾರ್ಡುದಾರರಿಗೆ ಅಕ್ಕಿಯ ಜತೆಗೆ ಜೋಳ ಹಾಗೂ ದಕ್ಷಿಣದ ರಾಜ್ಯಗಳಿಗೆ ಅಕ್ಕಿಯ ಜತೆ ರಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಏಪ್ರಿಲ್ 1ರಿಂದ ಎರಡು ಕೆಜಿ ಅಕ್ಕಿ ಜತೆಗೆ ಮೂರು ಕೆಜಿ ಜೋಳವನ್ನು ಉತ್ತರ ಕರ್ನಾಟಕದದ 15 ಜಿಲ್ಲೆಗಳಿಗೆ ನೀಡಿದರೆ, ದಕ್ಷಿಣದ ಜಿಲ್ಲೆಗಳಿಗೆ ಎರಡು ಕೆಜಿ ಅಕ್ಕಿಯೊಂದಿಗೆ ಮೂರು ಕೆಜಿ ರಾಗಿ ವಿತರಿಸಲಾಗುವುದು ಎಂದು ಉಮೇಶ್ ಕತ್ತಿ ತಿಳಿಸಿದ್ದಾರೆ.
ಖಾತೆ ನೀಡಿದ ಬಳಿಕ ನಾನು ದೆಹಲಿಯ ಕೇಂದ್ರ ಸಚಿವರನ್ನು ಭೇಟಿ ಮಾಡಿ ಅಕ್ಕಿಯೊಂದಿಗೆ ರಾಗಿ ವಿತರಿಸುವ ಕುರಿತು ಚರ್ಚಿಸಿದೆ. ಈ ನಿರ್ಧಾರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ರಾಜ್ಯದ ರೈತರಿಂದ ಜೋಳ, ರಾಗಿ ಮತ್ತು ಅಕ್ಕಿ ಸಂಗ್ರಹಿಸಲು ಕೇಂದ್ರ ಸರ್ಕಾರದಿಂದಲೂ ಅನುಮೋದನೆ ಪಡೆದಿದ್ದೇನೆ ಎಂದು ಕತ್ತಿ ಹೇಳಿದರು.