ಫೆ.20 ರಂದು ಡಾ.ಪ್ರಕಾಶ್ ಕಣಿವೆ ಅವರಿಗೆ ‘ಪ್ರದೀಪ ಪುರಸ್ಕಾರ’
ಉಡುಪಿ: ಬಾಸಾಪುರ ಇದರ ವತಿಯಿಂದ ಕೊಡಮಾಡುವ ‘ಪ್ರದೀಪ ಪುರಸ್ಕಾರ’ ಪ್ರದಾನ ಸಮಾರಂಭ ಫೆ 20 ರಂದು ಮಧ್ಯಾಹ್ನ 3 ಗಂಟೆಗೆ ಕೊಪ್ಪದ ಬಿಲಗದ್ದೆಯ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಸುಜನ ಟ್ರಸ್ಟ್ ನ ಸಂಚಾಲಕ ಸುಧೀರ್ ಕುಮಾರ್ ಮರೋಳಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಈ ಕಾರ್ಯಕ್ರಮವನ್ನು ವಿಧಾನ ಸಭೆಯ ಮಾಜಿ ಸಭಾಪತಿ ರಮೇಶ್ ಕುಮಾರ್ ಉದ್ಘಾಟಿಸಲಿದ್ದಾರೆ.
ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಡಿ. ರಾಜೇ ಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ಅವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಬೆಂಗಳೂರು ಇದರ ಅಧ್ಯಕ್ಷ ಶ್ರೀನಿವಾಸ್ ಬಾಬು ಎಲ್ ಅವರು ಡಾ. ಪ್ರಕಾಶ್ ಕಣಿವೆ ಅವರಿಗೆ ‘ಪ್ರದೀಪ ಪುರಸ್ಕಾರ’ ನೀಡಿ ಗೌರವಿಸಲಿದ್ದಾರೆ ಎಂದು ತಿಳಿಸಿದರು.
1989ರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ವೈಕುಂಠ ಬಾಳಿಗ ಕಾನೂನು ಕಾಲೇಜು ಉಡುಪಿಯಲ್ಲಿ ಸೇರ್ಪಡೆಗೊಂಡ ಇವರು ಅದೇ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆಸಲ್ಲಿಸಿ, ಕಳೆದ ವರ್ಷ ನಿವೃತ್ತಿ ಪಡೆದಿದ್ದಾರೆ. ‘ಅಭಿವೃದ್ಧಿ ಕಾರ್ಯಗಳಿಂದ ನಿರ್ವಸತಿಗರಾದ ನಾಗರೀಕರ ಪುನರ್ವಸತಿ ಹಕ್ಕುಗಳು’ ಕುರಿತು ಮಂಡಿಸಿದ ಪ್ರೌಢ ಪ್ರಬಂಧಕ್ಕೆ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪುರಸ್ಕಾರವನ್ನು ಪಡೆದಿದ್ದಾರೆ. ಅಲ್ಲದೇ, ಕರ್ನಾಟಕ ರಾಜ್ಯ ಮಟ್ಟದಲ್ಲಿ ನಡೆಯುವ ಕಾನೂನು ಪರೀಕ್ಷೆಗಳ ಮೌಲ್ಯಮಾಪನ ಮುಖ್ಯಸ್ಥರಾಗಿ ಆರು ಬಾರಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದು, ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿ ಮಂಗಳೂರು ವಿಶ್ವವಿದ್ಯಾಲಯ ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳಲ್ಲಿ 15 ವರ್ಷಗಳ ಕಾಲ ಕಾರ್ಯನಿರ್ವಹಿದ್ದಾರೆ. ಹಲವು ಅಧಿಕೃತ ಲಾ ಜರ್ನಲ್‍ಗಳಲ್ಲಿ ಕಾನೂನು ವಿಷಯಗಳ ಲೇಖನಗಳನ್ನು ಪ್ರಕಟಿಸಿದ್ದಾರೆ. ಇದರೊಂದಿಗೆ ಹತ್ತು ಹಲವು ರಾಜ್ಯ ಮತ್ತು ರಾಷ್ಟ್ರಮಟ್ಟದ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಅನುಭವ ಹೊಂದಿದ್ದಾರೆ.
ಈ ಸಂದರ್ಭ ವಕೀಲರಾದ ಆನಂದ ಮಡಿವಾಳ, ಸ್ಟೀವನ್ ಸಿಕ್ವೇರ, ಗುತ್ತಿಗೆದಾರ ಸುನೀಲ್ ಕುಮಾರ್ , ಚಿಕ್ಕಮಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎಸ್ ಎಸ್ ವೆಂಕಟೇಶ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ ಎಸ್ ಶ್ರೀಧರ್, ನವೀನ್, ಗಂಗಾಧರ, ಎನ್ ಪಿ ದೇವೇಂದ್ರ, ಸಂತೋಷ್ ಶೆಟ್ಟಿ, ರಾಘವೇಂದ್ರ ಶೆಟ್ಟಿ, ನವೀನ್ ಮಾವಿನ ಕಟ್ಟೆ ಉಪಸ್ಥಿತರಿದ್ದರು.