ಉಡುಪಿ ನಗರಸಭೆ, ಎಂಜಿಎಂ ಕ್ರಿಕೆಟರ್ಸ್, ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ನಿಂದ ಹೆದ್ದಾರಿ ಸ್ವಚ್ಚತೆ
ಉಡುಪಿ: ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಚ ಇರಬೇಕು ಎಂಬ ಪರಿಕಲ್ಪನೆಯನ್ನು ಈ ದೇಶದ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದಾರೆ. ಅದರಂತೆ ದೇಶದಾದ್ಯಂತ ಸ್ವಚ್ಚ ಭಾರತ್ ಅಭಿಯಾನ ನಿರಂತರವಾಗಿ ನಡೆದಿದೆ. ಉಡುಪಿಯ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ ರಾಶಿ ಬಿದ್ದ ಕಸದ ರಾಶಿಯನ್ನು ಸ್ವಚ್ಚತೆ ನಡೆಸಿದ್ದೇವೆ ಎಂದು ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಹೇಳಿದರು.
ಶನಿವಾರ ನಗರಸಭೆ ಮತ್ತು ಎಂ.ಜಿ.ಎಂ ಕ್ರಿಕೆಟರ್ಸ್, ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ಉಡುಪಿಯ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಹೆದ್ದಾರಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರು ಕ್ರಿಕೆಟ್ ತಂಡದವರು ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸುದರ ಮೂಲಕ ಯುವಕರಿಗೆ ಪ್ರೇರಣೆಯಾಗಿದ್ದಾರೆ. ಎಂ.ಜಿ.ಎಂ ಕ್ರಿಕೆಟರ್ಸ್ ತಂಡವನ್ನು ನೋಡಿ ಇನ್ನು ಹೆಚ್ಚಿನ ಕ್ರಿಕೆಟ್ ತಂಡಗಳು ಸಾಮಾಜಿಕ ಕಳಕಳಿಯ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ನುಡಿದರು.
ರಾಷ್ಟ್ರೀಯ ಹೆದ್ದಾರಿ 66 ಬಲಾಯಿಪಾದೆಯಿಂದ ಸಂತೆಕಟ್ಟೆವರೆಗೆ ಎರಡು ಕಡೆಗಳಲ್ಲಿ ಸ್ವಚ್ಚತೆಯನ್ನು ನಡೆಸಲಾಯಿತು. ಎಂ.ಜಿ.ಎಂ ಕ್ರಿಕೆಟರ್ಸ್ ನ ಶ್ರೀಶ ನಾಯಕ್, ದಿನಕರ್ ಪೂಜಾರಿ, ಗಿರೀಶ್ ಕಾಂಚನ್ ಸೇರಿದಂತೆ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದರು.