ಆಸ್ಪತ್ರೆಯಲ್ಲಿ ಸ್ನಾನ ಮಾಡುತ್ತಿದ್ದ ದೃಶ್ಯ ಚಿತ್ರೀಕರಿಸಿದ್ದ ಆರೋಪಿಯ ಬಂಧನ
ಉಳ್ಳಾಲ: ಆಸ್ಪತ್ರೆಯಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯ ಸ್ನಾನದ ದೃಶ್ಯ ಚಿತ್ರೀಕರಿಸಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಮದನಿನಗರ ನಿವಾಸಿ ಅಬ್ದುಲ್ ಮುನೀರ್ (40) ಬಂಧಿತ ಆರೋಪಿ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜ.20 ರಂದು ಮಹಿಳೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಪೊಲೀಸರು ಆಸ್ಪತ್ರೆಯ ಸಿಸಿಟಿವಿಯ ದಾಖಲೆಗಳನ್ನು ಪರಿಶೀಲಿಸಿದಾಗ ಮುನೀರ್ ಕೃತ್ಯ ಎಸಗಿರುವುದು ಸಾಬೀತಾಗಿದೆ. ಸದ್ಯ ತನಿಖೆಯನ್ನು ಚುರುಕುಗೊಳಿಸಿದ ಪೊಲಿಸರು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಆತನ ಮನೆ ಸಮೀಪ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಬಂಧಿಕರೊಬ್ಬರಿಗೆ ಅನಾರೋಗ್ಯವಾದ ಹಿನ್ನೆಲೆ ಅವರ ಜೊತೆಗೆ ಆಸ್ಪತ್ರೆಗೆ ಬಂಧಿದ್ದ ಮಹಿಳೆ ಆಸ್ಪತ್ರೆಯಲ್ಲಿ ಸ್ನಾನ ಮಾಡಲು ತೆರಳಿದ್ದ ವೇಳೆ ಆರೋಪಿ ಮೊಬೈಲ್ ಮೂಲಕ ಮಹಿಳೆ ಸ್ನಾನ ಮಾಡುತ್ತಿರುವ ದೃಶ್ಯ ಸೆರೆ ಹಿಡಿದಿದ್ದಾನೆ. ಇದನ್ನು ಗಮನಿಸಿದ ಮಹಿಳೆ ಕೂಡಲೇ ಹೊರಬಂದಾಗ, ಆರೋಪಿ ಮುನೀರ್ ತಲೆಮರೆಸಿಕೊಂಡಿದ್ದನು. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ಠಾಣಾಧಿಕಾರಿ ಸಂದೀಪ್ ಜಿ.ಎಸ್ ಹಾಗೂ ಪಿಎಸ್ಐ ಶಿವಕುಮಾರ್ ನೇತೃತ್ವದಲ್ಲಿ ಎಎಸ್ಐ ರೇವಣ್ಣ ಸಿದ್ಧಯ್ಯ ಹಾಗೂ ಸಿಬ್ಬಂದಿಗಳಾದ ಪ್ರಶಾಂತ್ ಮತ್ತು ಅಕ್ಬರ್ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.