ಉಡುಪಿ: ಏರ್ ಗನ್’ನಿಂದ ನಾಯಿಯ ಹತ್ಯೆ – ಆರೋಪಿಯ ಬಂಧನ
ಉಡುಪಿ: (ಉಡುಪಿ ಟೈಮ್ಸ್ ವರದಿ)ಅದೆಷ್ಟೋ ಬಾರಿ ಮೂಕ ಪ್ರಾಣಿಗಳು ಅಪಘಾತಗಳಲ್ಲಿ ತಮ್ಮದಲ್ಲದ ತಪ್ಪಿಗೆ ಹಸುನೀಗಿರುವುದನ್ನು ನಾವು ನೋಡಿರುತ್ತೇವೆ. ಎಷ್ಟೂ ಬಾರಿ ಈ ಮೂಕ ಪ್ರಾಣಿಗಳ ಸಾವಿಗೆ ನ್ಯಾಯವೇ ಇಲ್ಲವೆ ಎಂದು ಮರುಗಿದ್ದೂ ಇದೆ. ಆದರೆ ಮುಂದಿನ ದಿನಗಳಲ್ಲಿ ಮೂಕ ಜೀವಿಗಳ ಸಾವಿಗೂ ನ್ಯಾಯ ಸಿಗಲಿದೆ ಎನ್ನುವುದಕ್ಕೆ ಉದಾಹರಣೆಯಾದ ಘಟನೆಯೊಂದು ಉಡುಪಿಯಲ್ಲಿ ನಡೆದಿದೆ.
ಹೌದು, ಉಡುಪಿಯ ಕೆಮ್ಮಣ್ಣಿನಲ್ಲಿ ಸಾಕು ನಾಯಿಯೊಂದನ್ನು ಹತ್ಯೆ ಮಾಡಿದ ಕಾರಣಕ್ಕೆ ಆರೋಪಿಯೊಬ್ಬನನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ. ಕೆಮ್ಮಣ್ಣು ನಿವಾಸಿ ಬ್ರಾನ್ ಡಿಸೋಜ ಬಂಧಿತ ಆರೋಪಿ. ಬಂಧಿತ ಆರೋಪಿಯಿಂದ ಏರ್ ಗನ್ನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರೆಸುತ್ತಿದ್ದಾರೆ.
ಫೆ.12ರ ಬೆಳಿಗ್ಗೆ ಕೆಮ್ಮಣ್ಣು ಮೂಡು ತೋನ್ಸೆ ನಿವಾಸಿ ಗುಂಡಪ್ಪ ಪೂಜಾರಿಯವರು ಕೆಮ್ಮಣ್ಣುವಿನ ಹಾಲು ಡೈರಿಯಿಂದ ವಾಪಸ್ಸು ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ, ಅವರ ಸಾಕು ನಾಯಿಯು ಅವರನ್ನು ಹಿಂಬಾಲಿಸಿಕೊಂಡು ಹೋಗುತ್ತಿತ್ತು. ಕೆಮ್ಮಣ್ಣು ನಿಡಂಬಳ್ಳಿ ಕಲ್ಯಾಣಪುರ ಸಾರ್ವಜಿನಿಕ ರಸ್ತೆಯಲ್ಲಿ ಹೋಗುತ್ತಿರುವಾಗ ನಿಡಂಬಳ್ಳಿ ನಿವಾಸಿಯಾದ ಬ್ರಾನ್ ಡಿಸೋಜಾ ಎಂಬವರು ಅವರ ಮನೆಯ ಎದುರು ರಸ್ತೆಯ ಬದಿಯಲ್ಲಿ ನಿಂತುಕೊಂಡು ಏರ್ ಗನ್ ನಿಂದ ಗುಂಡಪ್ಪ ಪೂಜಾರಿಯವರನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ಅವರ ಸಾಕು ನಾಯಿಗೆ ಶೂಟ್ ಮಾಡಿದ್ದಾನೆ. ಪರಿಣಾಮ ನಾಯಿಯ ಬಲಬದಿಯ ಹೊಟ್ಟೆಗೆ ಗಾಯವಾಗಿದ್ದು ನಾಯಿಯು ಸಮೀಪದ ತೆರೇಸಾ ರವರ ಮನೆಯ ಅಂಗಳದಲ್ಲಿ ಮೃತ ಪಟ್ಟಿದೆ ಎಂದು ಗುಂಡಪ್ಪ ಪೂಜಾರಿಯವರು ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ 1960 ಪ್ರಾಣಿ ಸಂರಕ್ಷಣಾ ಕಾಯ್ದೆ, ಪ್ರಾಣಿಗಳ ಮೇಲಿನ ಕ್ರೌರ್ಯ ಸೆಕ್ಷನ್ 429 ಅಡಿಯಲ್ಲಿ ಎಫ್ ಐ ಆರ್ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿತ್ತು. ಸಂಜೆ ವೇಳೆಗೆ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಈ ನಡುವೆ ನಾಯಿ ಹತ್ಯೆ ಪ್ರಕರಣವನ್ನು ಖಂಡಿಸಿರುವ ಮಲ್ಪೆ ಮಧ್ವ ರಾಜ್ ಅನಿಮಲ್ ಕೇರ್ ಟ್ರಸ್ಟ್ ನ ಬಬಿತ ಮಧ್ವರಾಜ್ ಮತ್ತು ಪ್ರಾಣಿಗಳ ಸಂರಕ್ಷಣೆ ಕಾರ್ಯಕರ್ತರಾದ ಡಾ.ಸುಹಾಸ್, ರೋಶ್ನಿ ಅವರು ಕಾನೂನು ಹೋರಾಟ ಮುಂದುವರಿಸಿ ಮೃತಪಟ್ಟ ನಾಯಿಗೆ ನ್ಯಾಯ ಒದಗಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.