6 ರಿಂದ 8ನೇ ತರಗತಿ ಫೆ.18ರಿಂದ ಶಾಲೆ ಆರಂಭ?

ಬೆಂಗಳೂರು: ವಿದ್ಯಾರ್ಥಿಗಳು ಮತ್ತು ಪೋಷಕರ ಉತ್ಸಾಹವನ್ನು ಪರಿಗಣಿಸಿರುವ ಶಿಕ್ಷಣ ಇಲಾಖೆಯು  6 ರಿಂದ 8ನೇ ತರಗತಿಗಳ ಮಕ್ಕಳಿಗೆ ಇದೇ 17 ಅಥವಾ 18ರಿಂದ ಶಾಲೆ ಆರಂಭಿ ಸಲು ತೀರ್ಮಾನಿಸಿದೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿ ಗಳಿಗೆ ಸೂಚನೆಯನ್ನೂ ನೀಡಿದೆ.

6ರಿಂದ 8ನೇ ತರಗತಿಯವರೆಗೆ ಪೂರ್ಣಾವಧಿ ಶಾಲೆ ನಡೆಯಲಿದೆ. 1ರಿಂದ 5ನೇ ತರಗತಿಯವ ರೆಗಿನ ವಿದ್ಯಾರ್ಥಿಗಳಿಗೆ ವಿದ್ಯಾಗಮ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

‘ಪ್ರಸ್ತುತ ಶೈಕ್ಷಣಿಕ ವರ್ಷದ ಉಳಿದ ತರಗತಿಗಳನ್ನು ಆರಂಭಿಸಬೇಕು ಎಂದು ರಾಜ್ಯದ ಎಲ್ಲ ಭಾಗದ ಪೋಷಕರು ಮತ್ತು ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಶಾಲಾರಂಭದ ಕುರಿತು ಫೆ.16ರಂದು ಸಭೆ ನಡೆಸಲಾಗುವುದು. ಆರೋಗ್ಯ, ವೈದ್ಯಕೀಯ ಶಿಕ್ಷಣ, ಸಮಾಜ ಕಲ್ಯಾಣ ಸಚಿವರು ಮತ್ತು ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.

ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿದ ಅವರು, ‘ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿನ ಶಾಲೆಗಳಿಗೆ ನಾನು ಭೇಟಿ ನೀಡಿದ್ದೇನೆ. ಈ ಎಲ್ಲ ಶಾಲೆಗಳಲ್ಲಿ ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ವಿದ್ಯಾರ್ಥಿಗಳೂ ಹೆಚ್ಚು ಆಸಕ್ತಿಯಿಂದ ಬರುತ್ತಿದ್ದಾರೆ’ ಎಂದು ಹೇಳಿದರು.

10ರಿಂದ 4ರವರೆಗೆ: ಸದ್ಯ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ನಡೆಯುತ್ತಿದೆ. 8 ಮತ್ತು 9ನೆಯ ತರಗತಿಯ ವಿದ್ಯಾರ್ಥಿಗಳು ದಿನಬಿಟ್ಟು ದಿನ ಶಾಲೆಗೆ ಬರುತ್ತಿದ್ದರು. 10,11 ಹಾಗೂ 12ನೇ ತರಗತಿಗಳ ಮಕ್ಕಳಿಗೆ ಯಾವುದೇ ಸಮಸ್ಯೆ ಇಲ್ಲದೆ ಯಶಸ್ವಿಯಾಗಿ ತರಗತಿಗಳು ನಡೆಯುತ್ತಿವೆ. 6ರಿಂದ 8ನೇ ತರಗತಿಯ ವಿದ್ಯಾರ್ಥಿಗಳೂ ಸೇರಿದಂತೆ ಎಲ್ಲರಿಗೆ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಪೂರ್ಣ ತರಗತಿಗಳನ್ನು ನಡೆಸಲು ನಿರ್ಧರಿಸಲಾಗಿದೆ.

ಕಡ್ಡಾಯವಲ್ಲ: ‘ತರಗತಿಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾದರೂ, ಶಾಲೆಗೆ ಹಾಜರಾಗುವುದು ಕಡ್ಡಾಯ ವಲ್ಲ. ಆನ್‌ಲೈನ್‌ ಮೂಲಕವೂ ಪಾಠವನ್ನು ಕೇಳಬಹುದು. ಶಾಲೆಗೆ ಬರುವ ವಿದ್ಯಾರ್ಥಿಗಳು ಪೋಷಕರ ಒಪ್ಪಿಗೆ ಪತ್ರ ತರುವುದು ಕಡ್ಡಾಯ’ ಎಂದೂ ಅಧಿಕಾರಿಯೊಬ್ಬರು ತಿಳಿಸಿದರು.

ದ್ವಿತೀಯ ಪಿಯು ಪರೀಕ್ಷೆ ಮೇ 24: ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯು ಮೇ 24ರಿಂದ ಜೂನ್ 16ರವರೆಗೆ ನಡೆಯಲಿದೆ.

ಈ ಹಿಂದೆ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿ, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಒಂದು ವಾರ ಸಮಯವನ್ನೂ ನೀಡಲಾಗಿತ್ತು. ಪೋಷಕರು, ವಿದ್ಯಾರ್ಥಿಗಳ ಮನವಿ ಮತ್ತು ಸಲಹೆಯನ್ನು ಗಮನದಲ್ಲಿಟ್ಟುಕೊಂಡು ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗಿದೆ. ನೀಟ್, ಜೆಇಇಗಳಂತಹ ಮುಂದಿನ ತರಗತಿಗಳ ಪ್ರವೇಶದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

ಎಸ್ಸೆಸ್ಸೆಲ್ಸಿ ವೇಳಾಪಟ್ಟಿ ಶೀಘ್ರ: ಪ್ರಸ್ತುತ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಈ ಅವಧಿ ಮುಗಿದ ತಕ್ಷಣವೇ ಅಧಿಕೃತ ವೇಳಾಪಟ್ಟಿ ಬಿಡುಗಡೆಯಾಗಲಿದೆ.

ಫಲಿತಾಂಶ ಜೂನ್‌ ಅಂತ್ಯಕ್ಕೆ: ದ್ವಿತೀಯ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶವನ್ನು ಜೂನ್‌ ಅಂತ್ಯದ ವೇಳೆಗೆ ಪ್ರಕಟಿಸಲಾಗುವುದು. ಉಳಿದ ತರಗತಿಗಳ ಫಲಿತಾಂಶವನ್ನು ಜೂನ್‌ 10 ರಂದು ಪ್ರಕಟಿಸಲಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲ ತರಗತಿಗಳನ್ನು ಏಕಕಾಲಕ್ಕೆ ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಸುರೇಶ್‌ಕುಮಾರ್ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!