ಪಂಚಾಯಿತಿ ಚುನಾವಣೆವರೆಗೂ ಆಡಳಿತಾಧಿಕಾರಿ ನೇಮಕ: ಮಾಧುಸ್ವಾಮಿ
ಬೆಂಗಳೂರು: ಗ್ರಾಮ ಪಂಚಾಯತ್ ಗಳಿಗೆ ಶೀಘ್ರ ಚುನಾವಣೆ ನಡೆಸಲು ಉದ್ದೇಶಿಸಿದ್ದು, ಅಲ್ಲಿಯವರೆಗೆ ಪಂಚಾಯತ್ ಗಳಿಗೆ ಆಡಳಿತಾಧಿಕಾರಿ ನೇಮಿಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಗುರುವಾರ ಹೇಳಿದ್ದಾರೆ.
ಇಂದು ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆ.ಸಿ. ಮಾಧುಸ್ವಾಮಿ, ಜಿಲ್ಲಾಧಿಕಾರಿ ಹಂತದಲ್ಲಿ ಆಡಳಿತಾಧಿಕಾರಿಗಳನ್ನು ನೇಮಿಸಲಾಗುವುದು. ತಕ್ಷಣದಿಂದ ಜಾರಿಗೆ ಬರುವಂತೆ ಈ ಕುರಿತು ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಉಪ ಖನಿಜ ನಿಯಮಾವಳಿ ಬದಲಿಸಲಾಗಿದೆ. ಇದರಿಂದ ತೂಕದ ಮೇಲೆ ರಿಯಾಯಿತಿ, ಬಿಲ್ ಕಟಾವಿನಲ್ಲಿ ರಾಜಧನ ಕಡಿಮೆ ಮಾಡುವ, ಸಣ್ಣ ಪ್ರಮಾಣದ ತೆರಿಗೆ, ಗ್ರಾನೈಟ್ ಉದ್ಯಮದಲ್ಲಿ ಕಡಿಮೆ ರಾಜಧನ ವಸೂಲಿ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಇಂದಿರಾ ಕ್ಯಾಂಟೀನ್ ನಲ್ಲಿ ದರ ಹೆಚ್ಚಿಸಬೇಕು ಎಂಬ ವಿಚಾರ ಚರ್ಚೆಗೆ ಬಂದಿತ್ತು. ಬೆಲೆ ಹೆಚ್ಚಳ ಅನಿವಾರ್ಯ ಎಂಬ ಪ್ರಸ್ತಾಪವಾಯಿತಾದರೂ ಅಂತಿಮ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಮುಂದಿನ ಸಂಪುಟ ಸಭೆಯಲ್ಲಿ ಈ ಪ್ರಸ್ತಾವದ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಮಹಾರಾಣಿ, ಮಂಡ್ಯ ಕ್ಲಸ್ಟರ್ ವಿವಿಗೆ ಅಧಿಕಾರಿಗಳ ನೇಮಕ. ಬೆಂಗಳೂರು ಕೇಂದ್ರ ವಿವಿಯ ಹೆಸರು ಬದಲಿಸಿ ಬೆಂಗಳೂರು ಸಿಟಿ ವಿವಿ ಎಂದು ಮರು ನಾಮಕರಣ ಮಾಡುವ, ಸರ್ಕಾರಿ ವಿಜ್ಞಾನ ಕಾಲೇಜಿಗೆ ವಿವಿ ಸ್ವರೂಪ ನೀಡಿ ನೃಪತುಂಗ ವಿವಿ ಎಂದು ಹೆಸರು ಬದಲಿಸುವ ಪ್ರಸ್ತಾವಗಳಿಗೂ ಅನುಮೋದನೆ ದೊರೆತಿದೆ ಎಂದರು.
ರಾಜ್ಯದ 1694 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 1307 ಆರೋಗ್ಯ ಉಪಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಇವುಗಳನ್ನು ಕ್ಷೇಮ ಕೇಂದ್ರಗಳನ್ನಾಗಿ ಉನ್ನತೀಕರಿಸಲು ಸಂಪುಟ ಒಪ್ಪಿಗೆ ನೀಡಿದೆ.
ರಾಜ್ಯದ ವಿವಿಧೆಡೆ ದಾಖಲಾದ 53 ಪ್ರಕರಣಗಳನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ. ಗಣೇಶ ವಿಸರ್ಜನೆ, ರೈತ ಹೋರಾಟ, ಇತರೆ ಹೋರಾಟಗಳಲ್ಲಿ ಭಾಗವಹಿಸಿದ್ದ ಹೋರಾಟಗಾರರ ಪ್ರಕರಣಗಳನ್ನು ವಾಪಸ್ ಪಡೆಯಲಾಗುವುದು. ಇವು ವೈಯಕ್ತಿಕ ಅಲ್ಲ, ಗುಂಪು ಪ್ರಕರಣಗಳು ಎಂದು ಸ್ಪಷ್ಟಪಡಿಸಿದರು.
ಈಗ ತೋಟಗಾರಿಕೆ ಕಾಲೇಜುಗಳು ಸಾಕಷ್ಟಿದ್ದು, ಹಾಸನ ಹಾಗೂ ಸಿಂಧಗಿಯಲ್ಲಿ ಹೊಸ ಕಾಲೇಜು ತೆರೆಯುವ ತೀರ್ಮಾನ ಕೈಬಿಡಲು ತೀರ್ಮಾನಿಸಲಾಗಿದೆ. ಬೆಂಗಳೂರಿನಲ್ಲಿ ವಿಜ್ಞಾನ ಗ್ಯಾಲರಿ ನಿರ್ಮಿಸಲು 2013-14 ರಲ್ಲಿ ಅನುಮೋದನೆಯಾಗಿದ್ದು, ಇದಕ್ಕೆ 80 ಕೋಟಿ ರೂ ನೆರವು ನೀಡಲು ನಿರ್ಧರಿಸಲಾಗಿದೆ.
ಲೋಕಶಿಕ್ಷಣ ಟ್ರಸ್ಟ್ ಗೆ ಕೆಂಗೇರಿ ಬಳಿ ನೀಡಿದ್ದ ಭೂಮಿಯನ್ನು ಸಂಸ್ಥೆ ಹೆಸರಿಗೆ ನೋಂದಣಿ ಮಾಡಿಕೊಡುವ, ಹುಳಿಮಾವು ಹಾಗೂ ಇತರೆ ಘಟಕದಿಂದ ಕೊಲಾರಕ್ಕೆ ಕೆ.ಸಿ.ವ್ಯಾಲಿ ಹೆಚ್ಚುವರಿ ನೀರು ಹರಿಸಲು ತೀರ್ಮಾನಿಸಲಾಗಿದೆ.
ಉಡುಪಿಯ ಬೈಂದೂರಿಗೆ ಸುತ್ತಮುತ್ತಲ ಕೆಲ ಗ್ರಾಮ ಪಂಚಾಯತ್ ಗಳನ್ನು ಸೇರಿಸಿ ಬೈಂದೂರ್ ಅನ್ನು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ, ನಗರ ಗ್ರಾಮಾಂತರ ಯೋಜನಾ ಕಾಯ್ದೆಗೆ ತಿದ್ದುಪಡಿ ಆಗಿದ್ದು, ಇದರಿಂದ ಸ್ಥಳೀಯವಾಗಿ ಯೋಜನೆಗಳನ್ನು ರೂಪಿಸಹುಬಹುದಾಗಿದೆ ಎಂದು ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ಕೊವಿಡ್-19 ನಿಂದಾಗಿ ಬಾಕಿ ಇರುವ ಸಹಕಾರ ಸಂಸ್ಥೆಗಳಿಗೆ ನೇಮಕ, ಸಕ್ಕರೆ ಕಾರ್ಖಾನೆ ಹೊರತುಪಡಿಸಿ ಉಳಿದ ಸಹಕಾರ ಸಂಘಗಳ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ. 1998 ಬ್ಯಾಚ್ ಪ್ರೊಬೇಷನರ್ಸ್ ಪಟ್ಟಿಯಲ್ಲಿ ಉಂಟಾಗಿದ್ದ ಗೊಂದಲ ಬಗೆಹರಿಸಿ ಆಗ ನೇಮಕಗೊಂಡವರಿಗೆ ಕೋರ್ಟ್ ಆದೇಶದಂತೆ ಸಂಬಳ ಹೆಚ್ಚಿಸುವ, ರಿಯಲ್ ಎಸ್ಟೇಟ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಇದರಿಂದಾಗಿ ಮಾರಾಟ ಒಪ್ಪಂದ ಮಾಡಿಕೊಳ್ಳಲು ಅವಕಾಶ ದೊರೆಯಲಿದೆ. ಜತೆಗೆ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ಸಚಿವ ಜೆ.ಸಿ. ಮಾಧು ಸ್ವಾಮಿ ಹೇಳಿದರು.
ನಗರಾಭಿವೃದ್ಧಿ ಇಲಾಖೆ ಅಡಿ ನೀರು ಸರಬರಾಜು ಮಂಡಳಿಗೆ 100 ಕೋಟಿ ಸಾಲ ನೀಡುವ, ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಅಡಿ ವೈದ್ಯರ ನೇಮಕ ಸಂದರ್ಭದಲ್ಲಿ ಹಾಲಿ ಗುತ್ತಿಗೆಯಡಿ ಸೇವೆ ಸಲ್ಲಿಸುತ್ತಿರುವವರಿಗೆ ಶೇ.2 ರಷ್ಟು ಕೃಪಾಂಕ ನೀಡುವ, ಸಿಎಆರ್, ಡಿಎಆರ್, ಕೆಎಸ್ಆರ್.ಪಿಯ ವಿವಿಧ ಪೊಲೀಸ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾನ್ಸ್ ಟೆಬಲ್ ಗಳು ಉನ್ನತ ಹುದ್ದೆಯ ಪರೀಕ್ಷೆ ಬರೆಯಲು ಮುಂದಾದರೆ 10 ಅಂಕವನ್ನು ಗ್ರೇಸ್ ಮಾರ್ಕ್ಸ್ ರೂಪದಲ್ಲಿ ನೀಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.