ಬೈಂದೂರು: ಹಿಂಸಾತ್ಮಕ ರೀತಿಯಲ್ಲಿ 18 ಅಕ್ರಮ ಗೋ ಸಾಗಾಟ – ಇಬ್ಬರ ಬಂಧನ
ಉಡುಪಿ: ಅಕ್ರಮವಾಗಿ ಗೋವು ಸಾಗಾಟಕ್ಕೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ತ್ರಾಸಿ ಮರವಂತೆಯ ಬಳಿ ನಡೆದಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ನಿವಾಸಿ ನಜೀರುಲ್ಲ (43) ಮತ್ತು ಮೈಸೂರಿನ ರಾಘವೇಂದ್ರ (25) ಬಂಧಿತ ಆರೋಪಿಗಳು.
ಇವರು, ಮಂಗಳೂರು ನೋಂದಣಿ ಸಂಖ್ಯೆಯ ಲಾರಿಯಲ್ಲಿ 18 ಎತ್ತುಗಳನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿ ಸಾಗಾಟ ಮಾಡುತ್ತಿದ್ದರು. ಸಾಗಾಟದ ವೇಳೆ ಎರಡು ಎತ್ತುಗಳು ಸಾವನ್ನಪ್ಪಿದ್ದು, ಉಳಿದ 16 ಎತ್ತುಗಳನ್ನು ರಕ್ಷಿಸಲಾಗಿದೆ. ಅಕ್ರಮವಾಗಿ ಗೋವು ಸಾಗಾಟದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ ಕೆ. ಹಾಗೂ ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ಅವರ ನೇತೃತ್ವದಲ್ಲಿ ತ್ರಾಸಿ ಮರವಂತೆಯ ಬಳಿ ಕಾರ್ಯಾಚರಣೆ ಕೈಗೊಂಡಿದ್ದರು.
ಈ ವೇಳೆ, ಗೋವುಗಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ನಿಲ್ಲಿಸಲು ಪೊಲೀಸರು ಸೂಚಿಸಿದಾಗ ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾರೆ ಈ ವೇಳೆ ಆರೋಪಿಗಳನ್ನು ಬೆನ್ನಟ್ಟಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯಕ್ಕೆ ಬಳಸಿದ ವಾಹನವನ್ನು ಪೊಲೀಸರು ಮುಟ್ಟುಗೋಲು ಹಾಕಿದ್ದು, ಈ ವಾಹನದಲ್ಲಿ ಮಹಾರಾಷ್ಟ್ರದ ಸೊಲ್ಲಾಪುರದಿಂದ ಕಾಸರಗೋಡಿನ ಚೇರ್ಕಳಕ್ಕೆ ಗೋವುಗಳನ್ನು ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.