ಚಿಟ್ಪಾಡಿ: ಪತ್ನಿ ಹಾಗೂ ಅತ್ತೆಯ ಕೊಲೆ – ಆರೋಪಿ ಪತಿ ದೋಷಿ, ಫೆ.15ರಂದು ಶಿಕ್ಷೆ ಪ್ರಕಟ

ಉಡುಪಿ: ಚಿಟ್ಪಾಡಿಯಲ್ಲಿ 6 ವರ್ಷಗಳ ಹಿಂದೆ ನಡೆದಿದ್ದ ಪತ್ನಿ ಹಾಗೂ ಅತ್ತೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತಿಯನ್ನು ದೋಷಿಯೆಂದು ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಸಂಜಯ ಕುಮಾರ್ ದತ್ತ ಶಿಕ್ಷೆಗೊಳಗಾದ ಪ್ರಕರಣದ ಅರೋಪಿ. ಇದೀಗ ಆರೋಪಿಯನ್ನು ದೋಷಿ ಎಂದು ಆದೇಶ ನೀಡಿರುವ ನ್ಯಾಯಾಲಯ ಆರೋಪಿಗೆ ನೀಡಲಾಗುವ ಶಿಕ್ಷೆ ಪ್ರಮಾಣವನ್ನು ಫೆ. 15ರಂದು ಪ್ರಕಟಿಸಲಿದೆ .

ಆರು ವರ್ಷಗಳ ಹಿಂದೆ ಉಡುಪಿಯ ಜನತೆಯನ್ನು ಬೆಚ್ಚಿ ಬೀಳಿಸಿದ ಪ್ರಕರಣ ಇದಾಗಿದ್ದು, ಮೂಲತಃ ಅಸ್ಸಾಂ ನಿವಾಸಿಯಾಗಿದ್ದ ಸಂಜಯ ಕುಮಾರ್, ಮಂಗಳೂರು ಬೈಕಂಪಾಡಿ ಫ್ಯಾಕ್ಟರಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಉಡುಪಿ ಚಿಟ್ಪಾಡಿಯ ಕಸ್ತೂರ್ಬಾನಗರದಲ್ಲಿ ನೆಲೆಸಿದ್ದ, ಈತನಿಗೆ ಚಿಟ್ಪಾಡಿಯ ನಿವಾಸಿ ಅರ್ಚನಾ ಎಂಬಾಕೆಯೊಂದಿಗೆ ವಿವಾಹವಾಗಿದ್ದು, ಮೂವರು ಮಕ್ಕಳ ಸಂಸಾರ ಅವರದಾಗಿತ್ತು. ಕ್ರಮೇಣ ಪತಿ ಪತ್ನಿ ನಡುವೆ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿ ಪದೇ ಪದೇ ಜಗಳ, ಗಲಾಟೆಗಳು ನಡೆಯುತ್ತಿತ್ತು.

ದಿನಕಳೆದಂತೆ ಈ ಜಗಳ ವಿಕೋಪಕ್ಕೆ ತೆರಳಿದ್ದು, 2015ರ ಎಪ್ರಿಲ್ 30ರಂದು ರಾತ್ರಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಕಂಡಿತ್ತು. ಜಗಳದ ನಡುವೆ ಸಿಟ್ಟಿನ ಬರದಲ್ಲಿ ಪತಿ ಸಂಜಯ್ ಕತ್ತಿಯಿಂದ ಪತ್ನಿ ಅರ್ಚನಾಳನ್ನು ಕಡಿದು ಮಾರಣಾಂತಿಕ ಹಲ್ಲೆ ನಡೆಸಿದ್ದ. ಅಲ್ಲದೆ ಇದನ್ನು ತಡೆಯಲು ಬಂದಿದ್ದ ಅತ್ತೆ ನಿರ್ಮಲಾ ಅವರಿಗೂ ಕತ್ತಿಯಿಂದ ಹಲ್ಲೆ ನಡೆಸಿ ಕೊಂದೇ ಬಿಟ್ಟಿದ್ದ. ಘಟನೆಯಲ್ಲಿ ಅತ್ತೆ ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರ ಗಾಯಗೊಂಡಿದ್ದ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ 2015ರ ಮೇ 1ರಂದು ಅವರು ಚಿಕಿತ್ಸೆಗೆ ಫಲಕಾರಿಯಾಗದೆ ಸಾವನ್ನಪಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಂಜಯ್ ನನ್ನು ಉಡುಪಿ ನಗರ ಠಾಣೆ ಪೊಲೀಸರು ಮೇ 5ರಂದು ಬಂಧಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ವೃತ್ತ ನಿರೀಕ್ಷಕ ಶ್ರೀಕಾಂತ್ ನಾಯ್ಕ್ ನ್ಯಾಯಾಲಯಕ್ಕ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಇದೀಗ ಪ್ರಕರಣದ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶ ಜೆ.ಎನ್. ಸುಬ್ರಹ್ಮಣ್ಯ ಅವರು ಆರೋಪಿ ಪತಿ ಸಂಜಯ್‍ಕುಮಾರ್ ದತ್ತನನ್ನು ದೋಷಿ ಎಂದು ತೀರ್ಪು ನೀಡಿದ್ದಾರೆ. ಈ ಪ್ರಕರಣದ ವಿಚಾರಣೆಯಲ್ಲಿ ಸರ್ಕಾರದ ಪರವಾಗಿ ಜಿಲ್ಲಾ ಸರ್ಕಾರಿ ಅಭಿಯೋಜಕಿ ಶಾಂತಿ ಬಾಯಿ ವಾದ ಮಂಡಿಸಿದರು. 

Leave a Reply

Your email address will not be published. Required fields are marked *

error: Content is protected !!