ಪ್ರೇಮಿಗಳ ದಿನಾಚರಣೆಗೆ ವಿದ್ಯಾರ್ಥಿ 5 ದಿನ ರಜೆ ಕೇಳಿದ್ದು ಯಾಕೆ ಗೊತ್ತಾ..? ಈತನ ರಜಾರ್ಜಿಯೂ ವೈರಲ್!!!
ಚಾಮರಾಜನಗರ: ವಿದ್ಯಾರ್ಥಿಗಳು ಸಾಮಾನ್ಯವಾಗಿ ಅನಾರೋಗ್ಯ, ಮನೆಯಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ರಜೆ ಕೇಳಿ ಶಾಲಾ ಮುಖ್ಯೋಪಾದ್ಯಾಯರಿಗೆ ರಜಾರ್ಜಿ ಪತ್ರ ಬರೆಯುವುದನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಬರೆದಿರುವ ರಜೆ ಅರ್ಜಿಯ ಪತ್ರ ಭಾರೀ ವೈರಲ್ ಆಗುತ್ತಿದೆ. ಇದಕ್ಕೆ ಕಾರಣ ವಿದ್ಯಾರ್ಥಿ ರಜೆಗೆ ನೀಡಿರುವ ಕಾರಣ ಹೌದು ಇಲ್ಲೊಬ್ಬ ವಿದ್ಯಾರ್ಥಿ ಫೆಬ್ರವರಿ 14 ರಂದು ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ರಜೆ ಕೇಳಿ ಪತ್ರ ಬರೆಯುವ ಮೂಲಕ ಸುದ್ದಿಯಾಗಿದ್ದಾನೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನ ದ್ವೀತಿಯ ಬಿ.ಕಾಂ ವಿದ್ಯಾರ್ಥಿ ಎಸ್ ಶಿವರಾಜು ವಿಕ್ಟರ್ ರಜೆ ಕೋರಿ ಪತ್ರ ಬರೆದಿರುವಾತ. ಇದೀಗ ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ವಿದ್ಯಾರ್ಥಿ ಬರೆದಿರುವ ರಜಾರ್ಜಿ ಪತ್ರದ ಸಾರಾಂಶ ಹೀಗಿದೆ.. ದೇಶದಾದ್ಯಂತ ಆಚರಿಸುವ ಪ್ರೇಮಿಗಳ ದಿನಾಚರಣೆಯ ಹಿನ್ನೆಲೆಯಲ್ಲಿ ಹುಡುಗಿಯರ ಕಾಟ ತಡೆಯಲು ಆಗುತ್ತಿಲ್ಲ. ಹೀಗಾಗಿ ನನಗೆ ಐದು ದಿನಗಳ ರಜೆ ಕೋರಿ ಎಂದು ಪ್ರಾಂಶುಪಾಲರಲ್ಲಿ ರಜೆ ಕೇಳಿ ಈ ವಿದ್ಯಾರ್ಥಿ ರಜಾರ್ಜಿ ಬರೆದಿದ್ದಾನೆ. ಈ ಅರ್ಜಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗಿದ್ದು, ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲದೆ ಈ ವಿದ್ಯಾರ್ಥಿಯ ರಜಾರ್ಜಿ ವೈರಲ್ ಆಗುತ್ತಿದ್ದಂತೆಯೇ ಸಾಕಷ್ಟು ಕಾಮೆಂಟ್ಸ್ ಗಳ ಸುರಿಮಳೆ ಕೂಡಾ ಸುರಿದಿದೆ. ಅನೇಕರು ಪ್ರೇಮಿಗಳ ದಿನಕ್ಕಾಗಿ ರಜೆ ಕೋರಿರುವುದು ಪ್ರಚಾರಕ್ಕಾಗಿ ಎಂದು ಕಮೆಂಟ್ ಮಾಡಿದರೆ ಇನ್ನು ಕೆಲವರು ಇದು ಸುಳ್ಳು ಕಾರಣ ಎಂದು ಪ್ರತಿಕ್ರಿಯಿಸಿದ್ದಾರೆ. ಪ್ರಾಂಶುಪಾಲರ ಸಹಿಯ್ನೂ ನಕಲು ಮಾಡಿದ್ದು ನೋಡಿದರೆ ಇದು ಪ್ರಚಾರಕ್ಕಾಗಿ ಮಾಡಿದ್ದು ಎಂದು ಹಲವರು ತಮ್ಮ ಅಭಿಪ್ರಾಯವನ್ನು ಕಮೆಂಟ್ಗಳ ಮೂಲಕ ವ್ಯಕ್ತ ಪಡಿಸಿದ್ದಾರೆ. ಅರ್ಜಿಯಲ್ಲಿ ಪ್ರಾಂಶುಪಾಲರ ಸಹಿ ಮತ್ತು ಮೊಹರೂ ಇರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಾಂಶುಪಾಲರು “ತನ್ನ ಸಹಿಯನ್ನು ಯಾರೋ ನಕಲಿ ಮಾಡಿ, ಮೊಹರನ್ನು ಕದ್ದು ಹಾಕಿಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ರಜಾರ್ಜಿಯನ್ನು ನೋಡುತ್ತಿದ್ದರೆ. ಹಿಂದೆಲ್ಲ ರಜಾರ್ಜಿಗೆ ಸೂಕ್ತ ಕಾರಣ ನೀಡಲು ತಡಕಾಡುತ್ತಿದ್ದ ವಿದ್ಯಾರ್ಥಿ ಜೀವನದ ನೆನಪು ಬರುತ್ತದೆ. |