ಅಂಬಲಪಾಡಿ: “ಸ್ವಸ್ತಿ ಟ್ರೋಫಿ” ಅಪೂರ್ವ ಪುತ್ತೂರು ಮಡಿಲಿಗೆ
ಉಡುಪಿ:(ಉಡುಪಿ ಟೈಮ್ಸ್ ವರದಿ) ಕ್ರೀಡಾ ಸಾಂಸ್ಕ್ರತಿಕ ಚಟುವಟಿಕೆಗಳ ಜೊತೆಗೆ ಸಮಾಜ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ನೈಜ ಯುವ ಶಕ್ತಿಯ ಅನಾವರಣ ಸಾಧ್ಯ. ಈ ನಿಟ್ಟಿನಲ್ಲಿ ಸ್ವಸ್ತಿ X1 ಕ್ರಿಕೆಟರ್ಸ್ ಅಂಬಲಪಾಡಿ ಇವರ ಸಮಾಜ ಮುಖಿ ಸೇವಾ ಚಟುವಟಿಕೆಗಳು ಶ್ಲಾಘನೀಯ ಎಂದು ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ. ಬೀ. ವಿಜಯ ಬಲ್ಲಾಳ್ ಹೇಳಿದರು.
ಅವರು ಸ್ವಸ್ತಿX1 ಕ್ರಿಕೆಟರ್ಸ್ ಅಂಬಲಪಾಡಿ ಇದರ ಆಶ್ರಯದಲ್ಲಿ ಅಂಬಲಪಾಡಿ ಲಾಲ್ ಬಹದೂರ್ ಶಾಸ್ತ್ರಿ ಮೈದಾನದಲ್ಲಿ ನಡೆದ 30 ಗಜಗಳ ಕ್ರಿಕೆಟ್ ಪಂದ್ಯಾಕೂಟ ‘ಸ್ವಸ್ತಿ ಟ್ರೋಫಿ’ಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ, ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಿ, ಕ್ರೀಡಾ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.
ಆರೋಗ್ಯವಂತ ದೇಹ ಪ್ರಕೃತಿ ಆರೋಗ್ಯವಂತ ಮನಸ್ಸಿಗೆ ಪೂರಕ. ಈ ನಿಟ್ಟಿನಲ್ಲಿ ಜನತೆಯ ಆರೋಗ್ಯದ ಕಾಳಜಿ ವಹಿಸುವ ಆಯುಷ್ಮಾನ್ ಭಾರತ್‌ನಂತಹ ಉದಾತ್ತ ಯೋಜನೆಗಳನ್ನು ಅರ್ಹ ಫಲಾಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಜೊತೆಗೆ ಯುವ ಜನತೆ ಕೂಡಾ ಸ್ಪಂದಿಸುವುದು ಇಂದಿನ ಅಗತ್ಯತೆ. ಸಾಧಕರನ್ನು ಗುರುತಿಸಿ ಗೌರವಿಸಿದಾಗ ಅವರಿಂದ ಇನ್ನಷ್ಟು ಉತ್ತಮ ಸಾಧನೆ ನಿರೀಕ್ಷಿಸಲು ಸಾಧ್ಯ. ಸ್ವಸ್ತಿ ಘಿI ಕ್ರಿಕೆಟರ್ಸ್ ಸಂಸ್ಥೆಯ ಕ್ರೀಡಾ, ಸಾಂಸ್ಕ್ರತಿಕ ಹಾಗೂ ಸಾಮಾಜ ಸೇವಾ ಚಟುವಟಿಕೆಗಳು ಯುವ ಜನತೆಗೆ ಮಾದರಿಯಾಗಲಿ ಎಂದು ಅವರು ನುಡಿದರು.
ಉಡುಪಿ ನಗರ ಆರಕ್ಷಕ ಠಾಣೆಯ ಉಪ ನಿರೀಕ್ಷಕ ಸಕ್ತಿವೇಲು ಮಾತನಾಡಿ ಸಮಾಜ ಸೇವಾ ಕಾರ್ಯಗಳ ಜೊತೆಗೆ ಯುವ ಶಕ್ತಿಗೆ ಚೈತನ್ಯ ನೀಡುವ ಹಾಗೂ ಬಾಲ್ಯದ ದಿನಗಳನ್ನು ನೆನಪಿಸುವಂತಹ ಕ್ರೀಡಾ ಕೂಟಗಳು ನಿರಂತರವಾಗಿ ಮೂಡಿ ಬರಲಿ ಎಂದರು. ಸಮಾಜ ಸೇವಕ ವಿಶು ಕುಮಾರ್ ಶೆಟ್ಟಿ ಅಂಬಲಪಾಡಿ ಮಾತನಾಡಿ ಸರಳ ಜೀವನ ಯಶಸ್ವೀ ಬದುಕಿನ ಸೂತ್ರ. ಇತರರ ಸಂಕಷ್ಟಕ್ಕೆ ಸ್ಪಂದಿಸುವ ಜೊತೆಗೆ ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಸ್ವಸ್ತಿ X1 ಕ್ರಿಕೆಟರ್ಸ್ ಸಾಧನೆ ಪ್ರಶಂಸನೀಯ ಎಂದರು.
ಸ್ವಸ್ತಿ ಟ್ರೋಫಿ ವಿಜೇತ ಅಪೂರ್ವ ಪುತ್ತೂರು, ರನ್ನರ್ ಅಪ್ ಸ್ಟಾರ್ ಬಾಯ್ಸ್ ಕಪ್ಪೆಟ್ಟು ಪಾದೆ ಹಾಗೂ ತೃತೀಯ ಸಹರಾ ಮೂಡುಬೆಟ್ಟು ಮತ್ತು ಫ್ರೆಂಡ್ಸ್ ಪಡುಕರೆ ತಂಡಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಸವ್ಯಸಾಚಿ ಪ್ರಸಿದ್ಧ್ ಆಚಾರ್ಯ ಪುತ್ತೂರು, ಪಂದ್ಯ ಶ್ರೇಷ್ಠ ಸಂದೇಶ್ ಪುತ್ತೂರು, ಉತ್ತಮ ಎಸೆತಗಾರ ಮನೋಜ್ ಅಂಬಲಪಾಡಿ, ಉತ್ತಮ ಗೂಟ ರಕ್ಷಕ ಸಾಗರ್ ಆಚಾರ್ಯ ಪುತ್ತೂರು ಅತಿಥಿಗಳಿಂದ ಬಹುಮಾನ ಸ್ವೀಕರಿಸಿದರು.
ಪ್ರಶಸ್ತಿ ವಿಜೇತ ರಾಜ್ಯ ಮಟ್ಟದ ವೀಕ್ಷಕ ವಿವರಣೆಗಾರ ಪ್ರಶಾಂತ್ ಕೆ.ಎಸ್. ಅಂಬಲಪಾಡಿ, ಹಿರಿಯ ಕರಾಟೆ ಶಿಕ್ಷಕ ವಾಮನ್ ಪಾಲನ್ ಅಂಬಲಪಾಡಿ, ನುರಿತ ವೀಕ್ಷಕ ವಿವರಣೆಗಾರ ಸಾಧಿಕ್ ಹುಸೇನ್ ಪಂದುಬೆಟ್ಟು ಮತ್ತು ಪ್ರತಿಭಾನ್ವಿತ ಕ್ರೀಡಾ ಪಟು ನಿಶಾಂತ್ ಅಂಬಲಪಾಡಿ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ, ದ.ಕ. ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಶ್ರೀ ನಾರಾಯಣ ಗುರು ಅರ್ಬನ್ ಕೊ-ಅಪರೇಟಿವ್ ಬ್ಯಾಂಕಿನ ಉಪಾಧ್ಯಕ್ಷೆ ವಿಜಯಾ ಜಿ. ಬಂಗೇರ, ಉದ್ಯಮಿ ವಿದ್ಯಾ ಶೆಟ್ಟಿ ಬನ್ನಂಜೆ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಪ್ರಕೋಷ್ಠಗಳ ಜಿಲ್ಲಾ ಸಂಯೋಜಕ ಜಗದೀಶ್ ಆಚಾರ್ಯ ಕಪ್ಪೆಟ್ಟು, ಯುವಕ ಮಂಡಲ ಅಂಬಲಪಾಡಿ ಅಧ್ಯಕ್ಷ ಗ್ರಾ.ಪಂ. ಸದಸ್ಯ ಹರೀಶ್ ಪಾಲನ್ ಕಪ್ಪೆಟ್ಟು, ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಸುನೀಲ್ ಕುಮಾರ್ ಕಪ್ಪೆಟ್ಟು, ರೋಹಿಣಿ ಕಪ್ಪೆಟ್ಟು, ಶಶಿಧರ್ ಸುವರ್ಣ ಕಿದಿಯೂರು, ಸುಂದರ ಪೂಜಾರಿ ಕಿದಿಯೂರು, ಸುಮಂಗಲ ಶಂಕರ ಪೂಜಾರಿ ಕಪ್ಪೆಟ್ಟು, ಸುಜಾತ ಸುಧಾಕರ ಕಪ್ಪೆಟ್ಟು, ಬಿಜೆಪಿ ಪಂಚಾಯತ್ ರಾಜ್ ಪ್ರಕೋಷ್ಠ ಉಡುಪಿ ನಗರ ಸಹ ಸಂಚಾಲಕ ಗಿರೀಶ್ ಅಮೀನ್ ಕಿದಿಯೂರು, ಹಿಂದೂ ಜಾಗರಣಾ ವೇದಿಕೆ ಉಡುಪಿ ತಾಲೂಕು ಅಧ್ಯಕ್ಷ ರಿಕೇಶ್ ಪಾಲನ್ ಕಡೆಕಾರು, ಬಿಜೆಪಿ ಅಂಬಲಪಾಡಿ ಶಕ್ತಿಕೇಂದ್ರ ಅಧ್ಯಕ್ಷ ನಾಗರಾಜ್ ಕರ್ಕೇರ ಕಿದಿಯೂರು, ಸ್ವಸ್ತಿ x1 ಕ್ರಿಕೆಟರ್ಸ್ ಅಧ್ಯಕ್ಷ ಸುನಿಲ್ ವಿ. ಕಪ್ಪೆಟ್ಟು, ಕಾರ್ಯದರ್ಶಿ ಕಾರ್ತಿಕ್ ಅಚಾರ್ಯ, ಪದಾಧಿಕಾರಿಗಳಾದ ಅಜಿತ್ ಅಂಬಲಪಾಡಿ, ಸುಜಿತ್ ಅಂಬಲಪಾಡಿ, ಗಣಪತಿ, ಸುಹಾಸ್ ಮುಂತಾದವರು ಉಪಸ್ಥಿತರಿದ್ದರು.