ಶಾಕಿಂಗ್: ದೆಹಲಿಯಲ್ಲಿ 1114 ಕೋವಿಡ್-19 ಸಾವುಗಳನ್ನು ಲೆಕ್ಕವೇ ಹಾಕಿಲ್ಲ!
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅತೀ ದೊಡ್ಡ ಮಹಾ ಎಡವಟ್ಟು ಬಯಲಾಗಿದ್ದು, ಇಲ್ಲಿನ ಸ್ಥಳೀಯ ಕಾರ್ಪೋರೇಷನ್ ಗಳು 1114 ಕೋವಿಡ್-19 ಸಾವುಗಳನ್ನು ಲೆಕ್ಕವೇ ಹಾಕಿಲ್ಲ ಎಂಬ ಆಘಾತಕಾರಿ ಮಾಹಿತಿ ಬಯಲಾಗಿದೆ.
ದೆಹಲಿಯಲ್ಲಿ ಇಂದು ನಡೆದ ಮೂರೂ ಕಾರ್ಪೋರೇಷನ್ ಗಳ (ಪೂರ್ವ, ಉತ್ತರ ಮತ್ತು ದಕ್ಷಿಣ)ಮೇಯರ್ ಗಳ ಸಭೆಯಲ್ಲಿ ಇಂತಹುದೊಂದು ಆಘಾತಕಾರಿ ಮಾಹಿತಿ ಬಯಲಾಗಿದೆ. ಮೂರು ಕಾರ್ಪೋರೇಷನ್ ಗಳು ಸಲ್ಲಿಕೆ ಮಾಡಿರುವ ದತ್ತಾಂಶ ಪಟ್ಟಿಯಲ್ಲಿ 1114 ಕೋವಿಡ್-19 ಸಾವುಗಳ ಲೆಕ್ಕವೇ ಇಲ್ಲ. ಸಲ್ಲಿಕೆಯಾದ ದತ್ತಾಂಶಗಳ ಪಟ್ಟಿಯಲ್ಲಿ ಮಾರ್ಚ್ ನಿಂದ ಜೂನ್ 10ರವರೆಗೂ 2098 ಕೊರೋನಾ ಪಾಸಿಟಿವ್ ಸಂತ್ರಸ್ಥರು ಸಾವನ್ನಪ್ಪಿದ್ದಾರೆ. ಇದಲ್ಲದೆ ಇದೇ ಅವಧಿಯಲ್ಲಿ ಸಂಭವಿಸಿದ 200ಕ್ಕೂ ಅಧಿಕ ಸಾವುಗಳು ಕೊರೋನಾ ಸೋಂಕಿತರದ್ದೇ ಆಗಿದೆ ಎಂದು ಹೇಳಲಾಗುತ್ತಿದೆ.
ದಕ್ಷಿಣ ದೆಹಲಿಯ ಎಂಸಿಡಿ ಝೋನ್ ನಲ್ಲಿ 1080 ದೇಹಗಳ ಅಂತ್ಯಕ್ರಿಯೆ ನಡೆದಿದ್ದು, ಉತ್ತರ ದೆಹಲಿಯಲ್ಲಿ 976 ದೇಹಗಳನ್ನು ಅಂತ್ರಕ್ರಿಯೆ ಮಾಡಲಾಗಿದೆ. ಅಂತೆಯೇ ಪೂರ್ವ ದೆಹಲಿಯಲ್ಲಿ 42 ದೇಹಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ ಎಂದು ದಕ್ಷಿಣ ದೆಹಲಿಯ ಸ್ಥಾಯಿ ಸಮಿತಿ ಅಧ್ಯಕ್ಷ ಭೂಪೇಂದ್ರ ಗುಪ್ತಾ ಹೇಳಿದ್ದಾರೆ.
ಇದೇ ಅಂಕಿ ಅಂಶಗಳನ್ನು ದೆಹಲಿ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಗೆ ಹೋಲಿಕೆ ಮಾಡಿದರೆ, ಜೂನ್ 9 ರವರೆಗೂ ದೆಹಲಿಯಲ್ಲಿ ಕೇವಲ 984 ಕೊರೋನಾ ಸಾವು ಸಂಭವಿಸಿದೆ ಎಂದು ಆರೋಗ್ಯ ಇಲಾಖೆ ಹೇಳಿತ್ತು. ಕೋವಿಡ್-19 ನಿಯಮಗಳಾನುಸಾರ ದೇಹಗಳನ್ನು ಹೂಳಲಾದ ಸಂಖ್ಯೆಗೆ ಅನುಗುಣವಾಗಿ ಕೋವಿಡ್-19 ಸಾವುಗಳ ಲೆಕ್ಕಾಚಾರ ಹಾಕಲಾಗುತ್ತದೆ. ಅದರಂತೆ ಆರೋಗ್ಯ ಇಲಾಖೆ 1114 ಕೋವಿಡ್-19 ಸಾವುಗಳನ್ನು ಮುಚ್ಚಿಟಿತೇ ಎಂಬ ಪ್ರಶ್ನೆ ಮೂಡುತ್ತದೆ. ಅಥವಾ ಆರೋಗ್ಯ ಇಲಾಖೆ ದೆಹಲಿ ಕಾರ್ಪೋರೇಷನ್ ಗಳಿಂದ ಅಂಕಿ ಅಂಶಗಳನ್ನೇ ಸಂಗ್ರಹಿಸಿಲ್ಲವೇ ಎಂಬ ಪ್ರಶ್ನೆಯೂ ಮೂಡುತ್ತಿದೆ.
ಎಂಸಿಡಿ ನೀಡಿರುವ ಮಾಹಿತಿ ಅನ್ವಯ ದೆಹಲಿ ಆರೋಗ್ಯ ಇಲಾಖೆ 250 ಕೊರೋನಾ ಸಾವು ಸಂಭವಿಸಿದೆ ಎಂದ ಸಂದರ್ಭದಲ್ಲಿ ಅದಾಗಲೇ ದೆಹಲಿಯಲ್ಲಿ 800ಕ್ಕೂ ಅಧಿಕ ಕೋವಿಡ್-19 ಸೋಂಕಿತರ ಶವಗಳನ್ನು ದೆಹಲಿ ಮಹಾನಗರ ಪಾಲಿಕೆ ಅಂತ್ಯ ಕ್ರಿಯೆ ಮಾಡಿದ್ದ ಅಂಶ ಕೂಡ ಬಯಲಾಗಿದೆ. ಪಂಜಾಬ್ ಬಾಗ್ ಸ್ಮಶಾಣವನ್ನು ಸಂಪೂರ್ಣವಾಗಿ ಕೋವಿಡ್-19ಗೇ ಮಿಸಲಿರಿಸಲಾಗಿದ್ದು. ನಿಗಂಬೋಧ್ ಘಾಟ್ ಮತ್ತು ಸೀಮಾಪುರಿ. ಘಾಜಿಪುರಿ ಸ್ಮಶಾಣದಲ್ಲೂ ಕೋವಿಡ್-19 ದೇಹಗಳನ್ನು ಹೂಳಲಾಗುತ್ತಿದೆ.